ಯುವಜನತೆಯಲ್ಲಿ ಆತ್ಮಸಾಕ್ಷಿ ಹೆಚ್ಚಲಿ: ನ್ಯಾ.ಆಚಾರ್ಯ

ಮಂಗಳೂರು, ಅ.16: ಇಂದಿನ ಯುವಜನತೆ ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಬರುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಅನಿವಾರ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣ ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಡಾ.ಪಿ.ದ.ಪೈ- ಪಿ.ಸ.ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ರಥಬೀದಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಏರ್ಪಡಿಸಿದ ವಿಶ್ವಮಾನಸಿಕ ಆರೋಗ್ಯ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯಇತರ ಎಲ್ಲ ಆರೋಗ್ಯಗಳಿಗಿಂತ ಹೆಚ್ಚು ಅವಶ್ಯಕ. ಮನಸ್ಸು, ವಿವೇಕ ಸರಿ ಇದ್ದಲ್ಲಿ ಬಾಹ್ಯ ಚಟುವಟಿಕೆಗಳು ಅರ್ಥಪೂರ್ಣವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ತಂತ್ರಜ್ಞಾನದಿಂದಾಗಿ ದಾರಿತಪ್ಪುತ್ತಿದ್ದು, ಅವರನ್ನು ಸರಿ ಮಾರ್ಗಕ್ಕೆ ತರುವುದು ವಿದ್ಯಾಸಂಸ್ಥೆಗಳ ಹೊಣೆ ಎಂದು ಅಭಿಪ್ರಾಯಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಗಂಗಾಧರ ಎ.ಜೆ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹರ್ಷಿತಾ ಎಂ.ವಿ ಹಾಗೂ ಸ್ಮಿತೇಶ್ ಬಾರ್ಯ ಭಾಗವಹಿಸಿದ್ದರು.
ಕಾಲೇಜು ಶೈಕ್ಷಣಿಕ ಸಲಹೆಗಾರ ಡಾ.ಶಿವರಾಮ ಪಿ., ಪ್ರಾಧ್ಯಾಪಕ ಡಾ.ಪ್ರಕಾಶಚಂದ್ರ ಬಿ., ಡಾ. ನಾಗಪ್ಪಗೌಡ ಕೆ., ಡಾ.ಶೈಲಾರಾಣಿ ಬಿ., ಡಾ.ಶರ್ಮಿಳಾ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ತೆರೆಸಾ ಪಿರೇರಾ ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕ ರವಿಕುಮಾರ ಎಂ.ಪಿ. ವಂದಿಸಿದರು.







