ಗೋವಾ: ‘ಕಣ್ಮರೆ’ಯಾಗಿದ್ದ ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ

ಹೊಸದಿಲ್ಲಿ, ಅ.16: ಗೋವಾದಿಂದ ಏಕಾಏಕಿ ‘ಕಣ್ಮರೆಯಾ’ಗಿದ್ದ ಇಬ್ಬರು ಕಾಂಗ್ರೆಸ್ ಶಾಸಕರು ಮಂಗಳವಾರ ಹೊಸದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿದ್ದು, ತಾವು ಬಿಜೆಪಿಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ನಾವಿಬ್ಬರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಎರಡು-ಮೂರು ಶಾಸಕರು ಬಿಜೆಪಿ ಸೇರ್ಪಡೆಯಾಗುವ ನಿರೀಕ್ಷೆಯಿದೆ ಎಂದು ದಯಾನಂದ ಸೋಪ್ಟೆ ಮತ್ತು ಸುಭಾಷ್ ಶಿರೋಡ್ಕರ್ ಹೇಳಿದ್ದಾರೆ.
ಸೋಮವಾರ ರಾತ್ರಿ ವಿಮಾನನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ದಯಾನಂದ ಸೋಪ್ಟೆ, ವ್ಯವಹಾರದ ನಿಮಿತ್ತ ದಿಲ್ಲಿಗೆ ಪ್ರವಾಸ ಹೋಗುತ್ತಿರುವುದಾಗಿ ತಿಳಿಸಿದ್ದರೆ, ಪಕ್ಷ ತ್ಯಜಿಸುವಿರಾ ಎಂಬ ಪ್ರಶ್ನೆಗೆ ಸುಭಾಷ್, ಹಾಗೆ ಮಾಡಿದಾಗ ನಿಮಗೆ ತಿಳಿಸುತ್ತೇನೆ ಎಂದಿದ್ದರು. ಇಬ್ಬರು ಶಾಸಕರೂ ಪಕ್ಷದೊಂದಿಗೇ ಇದ್ದಾರೆ. ಪಕ್ಷ ಬಿಡುವುದಿಲ್ಲ ಎಂದು ಗೋವಾ ಕಾಂಗ್ರೆಸ್ ಮುಖಂಡ ಎ.ಚೆಲ್ಲಕುಮಾರ್ ಸೋಮವಾರ ಹೇಳಿಕೆ ನೀಡಿದ್ದರು. ಇವರಿಬ್ಬರು ಪಕ್ಷ ನಿಷ್ಠೆ ಬದಲಿಸಲು ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಕಾರಣ. ಅವರು ಶಾಸಕರಿಗೆ ಆಮಿಷವೊಡ್ಡಿದ್ದಾರೆ. ಅಲ್ಪಮತದ ಬಿಜೆಪಿ ಸರಕಾರಕ್ಕೆ ಇಬ್ಬರು ಕಾಂಗ್ರೆಸ್ ಶಾಸಕರ ಬೆಂಬಲ ದೊರಕಿಸಿಕೊಟ್ಟರೆ ತನ್ನನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕು ಎಂದು ರಾಣೆ ಬಿಜೆಪಿ ಹೈಕಮಾಂಡ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಚೆಲ್ಲಕುಮಾರ್ ಆರೋಪಿಸಿದ್ದಾರೆ.
40 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 16 ಶಾಸಕರನ್ನು ಹೊಂದಿತ್ತು. ಇದೀಗ ಈ ಇಬ್ಬರು ಬಿಜೆಪಿ ಸೇರ್ಪಡೆಗೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಬಲ 14ಕ್ಕೆ ಕುಸಿಯಲಿದೆ. 14 ಶಾಸಕರನ್ನು ಹೊಂದಿರುವ ಬಿಜೆಪಿಗೆ ತಲಾ ಮೂರು ಶಾಸಕರನ್ನು ಹೊಂದಿರುವ ಮಹಾರಾಷ್ಟ್ರವಾದಿ ಗೋಮಂತಕ ಪಕ್ಷ ಮತ್ತು ಗೋವಾ ಫಾರ್ವರ್ಡ್ ಪಕ್ಷ , ಒಬ್ಬ ಶಾಸಕರನ್ನು ಹೊಂದಿರುವ ಎನ್‌ಸಿಪಿ ಹಾಗೂ ಮೂವರು ಪಕ್ಷೇತರರು ಬೆಂಬಲ ಸೂಚಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿದೆ.
ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ , ಗೋವಾದಲ್ಲಿ ಸರಕಾರ ರಚನೆಯ ಪ್ರಸ್ತಾವವನ್ನು ಕಾಂಗ್ರೆಸ್ ಮತ್ತೊಮ್ಮೆ ಮಂಡಿಸಿತ್ತು. ಆದರೆ ಇದೀಗ ಇಬ್ಬರು ಶಾಸಕರ ನಡೆ ಕಾಂಗ್ರೆಸ್ ಮುಖಂಡರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.







