ಕೆಎಸ್‌ಸಿಎ: ಅಂತರ್ ಶಾಲಾ-ಪಿಯು ಕ್ರಿಕೆಟ್ ಟೂರ್ನಿ; ಎಂಜಿಎಂ, ಶಾರದಾ, ವೆಂಕಟರಮಣ ಕಾಲೇಜಿಗೆ ಜಯ
ಮಣಿಪಾಲ, ಅ.16: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಮಾಹೆಯ ಎಂಡ್‌ಪಾಯಿಂಟ್ ಕ್ರಿಕೆಟ್ ಮೈದಾನದಲ್ಲಿ ನಡೆದಿರುವ ಅಂತರ್ ಶಾಲಾ ಕ್ರಿಕೆಟ್ ಪಂದ್ಯಾಟದಲ್ಲಿ ಇಂದು ಉಡುಪಿಯ ಮಾಧವ ಕೃಪಾ ಮತ್ತು ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ತಂಡಗಳ ನಡುವಿನ ಪಂದ್ಯ ಮಳೆಯಿಂದ ಅರ್ಧದಲ್ಲೇ ರದ್ದಾಗಿದ್ದು, ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಶಾರದಾ ತಂಡ 32 ಓವರುಗಳಲ್ಲಿ 108 ರನ್‌ಗಳಗೆ ಆಲೌಟಾದರೆ, ಉತ್ತರವಾಗಿ ಮಾಧವ ಕೃಪಾ ತಂಡ 37 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಮಳೆಯಿಂದ ಪಂದ್ಯವನ್ನು ನಿಲ್ಲಿಸಲಾಯಿತು.13 ರನ್ ನೀಡಿ 5 ವಿಕೆಟ್ ಕಿತ್ತ ಮಾಧವಕೃಪಾ ಶಾಲಾ ತಂಡದ ಗೋಕುಲ್‌ದಾಸ್ ಮ್ಯಾಚ್ ಬಾಲನ್ನು ಸ್ವೀಕರಿಸಿದರು.
ಪದವಿ ಪೂರ್ವ ಕಾಲೇಜುಗಳ ನಡುವಿನ ಪಂದ್ಯದಲ್ಲಿ ಎಂಜಿಎಂ ಪಿಯು ಕಾಲೇಜು ತನ್ನ ಎದುರಾಳಿ ಕಾಪುವಿನ ದಂಡತೀರ್ಥ ಪಿಯು ಕಾಲೇಜನ್ನು 10ವಿಕೆಟ್‌ಗಳ ಅಂತರದಿಂದ ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ದಂಡತೀರ್ಥ ತಂಡ ಕೇವಲ 35 ರನ್‌ಗಳಿಗೆ ಆಲೌಟಾದರೆ, ಎಂಜಿಎಂ ವಿಕೆಟ್ ನಷ್ಟವಿಲ್ಲದೇ ಮೂರು ಓವರುಗಳಲ್ಲಿ ವಿಜಯಿ ರನ್ ಗಳಿಸಿತು.
ಎಂಐಟಿ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ತಂಡ, ಉಡುಪಿಯ ಇಂಎಂಹೆಚ್‌ಎಸ್ ತಂಡವನ್ನು 29 ರನ್‌ಗಳ ಅಂತರದಿಂದ ಮಣಿಸಿತು. ಶಾರದಾ ಶಾಲಾ ತಂಡ ಮೊದಲು ಬ್ಯಾಟಿಂಗ್ ನಡೆಸಿ 93 ರನ್‌ಗಳಿಗೆ ಆಲೌಟಾದರೆ, ಇಎಂಹೆಚ್‌ಎಸ್ ತಂಡ 64 ರನ್‌ಗಳಿಗೆ ಆಲೌಟಾಗಿ 29 ರನ್‌ಗಳ ಅಂತರದ ಸೋಲು ಕಂಡಿತು.
ಎಂಡ್ ಪಾಯಿಂಟ್ ಮೈದಾನದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ನಡುವಣ ಪಂದ್ಯದಲ್ಲಿ ಕುಂದಾಪುರದ ವೆಂಕಟರಮಣ ಪಿಯು ಕಾಲೇಜು, ಎಂಜಿಎಂ ಕಾಲೇಜನ್ನು 88 ರನ್‌ಗಳಿಂದ ಪರಾಭವಗೊಳಿಸಿತು.







