ಮಂಗಳೂರು: ಎಸ್‌ಬಿಐ ವೆಲ್ತ್ ಬ್ಯುಸಿನೆಸ್‌ಗೆ ಚಾಲನೆ

ಮಂಗಳೂರು, ಅ. 20: ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ನಗರದ ಲಾಲ್‌ಬಾಗ್‌ನಲ್ಲಿ ಸ್ಥಾಪಿಸಿರುವ ಎಸ್‌ಬಿಐ ವೆಲ್ತ್ ಹಬ್‌ಗೆ ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಶನಿವಾರ ಚಾಲನೆ ನೀಡಿದರು.
ಅದಕ್ಕೂ ಮೊದಲು ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಎಸ್‌ಬಿಐ ಎಕ್ಸ್‌ಕ್ಲೂಸಿಫ್ ಹೆಸರಿನಲ್ಲಿದ್ದ ವೆಲ್ತ್ ಬ್ಯುಸಿನೆಸ್ ಸೇವೆಯನ್ನು ಇದೀಗ ಎಸ್‌ಬಿಐ ವೆಲ್ತ್ ಎಂದು ನಾಮಕರಣ ಮಾಡಲಾಗಿದೆ. ಇದು ವೈಯಕ್ತಿಕ ಬ್ಯಾಂಕಿಂಗ್ ಮತ್ತು ಹೂಡಿಕೆ ಸೇವೆಯನ್ನು ಗ್ರಾಹಕರಿಗೆ ನೀಡುತ್ತದೆ. ಎಸ್‌ಬಿಐ ವೆಲ್ತ್ ಬ್ಯುಸಿನೆಸ್‌ನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ವಿಶೇಷ ವ್ಯವಸ್ಥಾಪಕರನ್ನು ನಿಯೋಜಿಸಲಾಗುತ್ತದೆ ಎಂದರು.
ಸದ್ಯ ಎಸ್‌ಬಿಐ ವೆಲ್ತ್ 20 ಪ್ರಮುಖ ಕೇಂದ್ರಗಳನ್ನು ಹೊಂದಿದೆ. ಅಲ್ಲದೆ ದೇಶದ 90 ವೆಲ್ತ್ ಹಬ್‌ಗಳ ಜೊತೆ ಸಂಪರ್ಕ ಹೊಂದಿದೆ. 2020ರೊಳಗೆ 50 ಎಸ್‌ಬಿಐ ವೆಲ್ತ್ ಸೆಂಟರನ್ನು ತೆರೆಯುವ ಗುರಿ ಹೊಂದಲಾಗಿದೆ. ಎಸ್‌ಬಿಐ ಇದೀಗ 35 ಸಾವಿರ ಗ್ರಾಹಕರಿಗೆ ಸೇವೆ ಒದಗಿಸುತ್ತದೆ. ಮುಂದಿನ 2 ವರ್ಷದಲ್ಲಿ ಈ ಗ್ರಾಹಕರ ಸಂಖ್ಯೆಯನ್ನು 1.25 ಲಕ್ಷಕ್ಕೇರಿಸುವ ಮತ್ತು 1 ಲಕ್ಷ ಕೋ.ರೂ. ವ್ಯವಹಾರ ಸಾಧಿಸುವ ಗುರಿ ಹೊಂದಿದೆ ಎಂದು ರಜನೀಶ್ ಕುಮಾರ್ ನುಡಿದರು.
ಎಚ್‌ಎನ್‌ಐ ತನ್ನ ಗ್ರಾಹಕರು ಹೂಡಿಕೆ ಮಾಡಲು ಮತ್ತು ವಹಿವಾಟು ನಡೆಸಲು ಪೋರ್ಟ್‌ಫೋಲಿಯೊಗಳನ್ನು ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಮತ್ತು ರಿಮೋಟ್ ರಿಲೇಶನ್‌ಶಿಪ್ ಮಾಡೆಲ್‌ನಂತಹ ಡಿಜಿಟಲ್ ಚಾನಲ್‌ಗಳ ಮೂಲಕ ವೀಕ್ಷಿಸುವ ಅವಕಾಶ ಕಲ್ಪಿಸಲಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಹಲವು ಪ್ರಮುಖ ತಂತ್ರಜ್ಞಾನ ಮತ್ತು ಉತ್ಪನ್ನ ಪಾಲುದಾರರ ಜೊತೆ ಒಪ್ಪಂದ ಮಾಡಿಕೊಂಡಿದೆ. ಎನ್‌ಆರ್‌ಐ ಗ್ರಾಹಕರಿಗೂ ಕೂಡಾ ಎಸ್‌ಬಿಐ ವೆಲ್ತ್ ಬ್ಯುಸಿನೆಸ್ ಸೇವೆ ಆರಂಭಿಸಿದೆ. ಅಲ್ಲದೆ ಕೊಚ್ಚಿನ್‌ನಲ್ಲಿ ಅತ್ಯಾಧುನಿಕ ಗ್ಲೋಬಲ್ ಇ ವೆಲ್ತ್ ಸೆಂಟರ್ ಆರಂಭಿಸಲು ಬ್ಯಾಂಕ್ ಸಿದ್ಧತೆ ನಡೆಸಿದೆ ಎಂದರು.







