ಕೊಡಗಿನ ಸಂತ್ರಸ್ತರಿಗಾಗಿ ಸುನ್ನೀ ಸಂಘಟನೆಗಳಿಂದ ಮನೆ ನಿರ್ಮಾಣ
ಕೊಣಾಜೆ, ಅ. 20: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ನಡೆದ ಭೀಕರ ಪ್ರಕೃತಿ ವಿಕೋಪದಲ್ಲಿ ಮನೆ ಮಠಗಳನ್ನು ಕಳೆದುಕೊಂಡಿರುವರಿಗೆ ಮನೆಗಳನ್ನು ನಿರ್ಮಿಸಿಕೊಡಲು ಕರ್ನಾಟಕ ರಾಜ್ಯ ಸುನ್ನೀ ಸಂಘಟನೆಗಳು ನಿರ್ಧರಿಸಿದೆ ಎಂದು ಕರ್ನಾಟಕ ಸುನ್ನೀ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ ಹೇಳಿದರು.
ಅವರು ಮಂಜನಾಡಿಯ ಅಲ್ ಮದೀನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡುತ್ತಾ, ಕೊಡಗಿನ ಪ್ರಮುಖ ಸುನ್ನೀ ಯುವ ನಾಯಕ ಅಬ್ದುಲ್ ಲತೀಫ್ ಶುಂಠಿಕೊಪ್ಪರವರು ಸಂತ್ರಸ್ತ್ರರಿಗಾಗಿ ಉದಾರವಾಗಿ ದಾನ ನೀಡಿರುವ ಒಂದು ಎಕರೆ ಜಾಗದಲ್ಲಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಸುಮಾರು 35 ಲಕ್ಷ ರೂಪಾಯಿಗಳ ಸಂಗ್ರಹವಾಗಿದ್ದು, ಸರ್ಕಾರ ಮತ್ತು ಇನ್ನಷ್ಟು ಉದಾರಿಗಳ ನೆರವಿನಿಂದ 20 ರಿಂದ 25ರಷ್ಟು ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶವಿದೆ ಎಂದರು.
ಉಲಮಾ ನಾಯಕರ ಕರೆಯ ಮೇರೆಗೆ ಎಸ್‍ವೈಎಸ್, ಎಸ್ಸೆಸ್ಸೆಫ್ ಮತ್ತು ಕೆಸಿಎಫ್ ಕಾರ್ಯಕರ್ತರು ಧನ ಸಂಗ್ರಹಕ್ಕಿಳಿದಿದ್ದರಯ. ಮುಅಲ್ಲಿಂ ಮತ್ತು ಮ್ಯಾನೇಜ್ಮೆಂಟ್ ನಾಯಕರೂ ಸಹಕರಿಸಿದ್ದಾರೆ. ಭೂಮಿಯ ದಾಖಲೆಗಳಿಗೆ ಸಂಬಂಧಿಸಿದಂತಹ ಪೂರ್ಣಗೊಂಡ ಬಳಿಕ ಮನೆ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಜಾತಿ ಮತ ಬೇಧವಿಲ್ಲದೆ ಅರ್ಹ ಬಡ ಸಂತ್ರಸ್ತರನ್ನು ಗುರುತಿಸಿ ಮನೆಗಳನ್ನು ವಿತರಿಸಲಾವುದು. ಕೇರಳದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಕರ್ನಾಟಕ ಎಸ್ಸೆಸ್ಸೆಫ್ ವತಿಯಿಂದ ಈಗಾಗಲೇ ಸುಮಾರು ಹದಿನೈದು ಲಕ್ಷ ರೂಪಾಯಿಗಳ ಪುಸ್ತಕ ಹಾಗೂ ಪಠ್ಯೋಪಕರಣಗಳನ್ನು ವಿತರಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನಾ, ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಜೆ.ಎಂ.ಮಹಮ್ಮದ್ ಕಾಮಿಲ್ ಸಖಾಫಿ, ಎಮ್ಮೆಸ್ಸೆಂ ಝೈನಿ ಕಾಮಿಲ್, ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಎಂ.ಬಿ.ಎಂ ಸಾಧಿಕ್ ಮಾಸ್ಟರ್, ಎನ್‍ಕೆಎಂ ಶಾಫಿ ಸಅದಿ ಮೊದಲಾದವರು ಉಪಸ್ಥಿತರಿದ್ದರು.







