ಬುಧ ಗ್ರಹಕ್ಕೆ ಶೋಧ ನೌಕೆಗಳನ್ನು ಕಳಹಿಸಿದ ಯುರೋಪ್, ಜಪಾನ್

ಟೋಕಿಯೊ, ಅ. 20: ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಬುಧ ಗ್ರಹದ ಸಂಶೋಧನೆಗಾಗಿ ಎರಡು ಶೋಧ ನೌಕೆಗಳನ್ನು ಯುರೋಪ್ ಮತ್ತು ಜಪಾನ್ ಬಾಹ್ಯಾಕಾಶ ಸಂಸ್ಥೆಗಳು ಶನಿವಾರ ಜಂಟಿಯಾಗಿ ಉಡಾಯಿಸಿವೆ.
ಎರಡು ಶೋಧ ನೌಕೆಗಳನ್ನು ಹೊತ್ತ ಬಾಹ್ಯಾಕಾಶ ನೌಕೆಯನ್ನು ಏರಿಯಾನ್ 5 ರಾಕೆಟೊಂದು ಯಶಸ್ವಿಯಾಗಿ ಉಡಾಯಿಸಿತು.
ಬುಧ ಗ್ರಹದತ್ತ ಏಳು ವರ್ಷಗಳ ಪ್ರಯಾಣಕ್ಕಾಗಿ ಹೊರಟ ಬಾಹ್ಯಾಕಾಶ ನೌಕೆ ‘ಬೆಪಿಕೊಲಂಬೊ’ ರಾಕೆಟ್‌ನಿಂದ ಯಶಸ್ವಿಯಾಗಿ ಕಳಚಿಕೊಂಡಿತು ಹಾಗೂ ಅದನ್ನು ಫ್ರೆಂಚ್ ಗಯಾನದಲ್ಲಿರುವ ನಿಯಂತ್ರಣ ಕೇಂದ್ರದ ಮೂಲಕ ಕಕ್ಷೆಯಲ್ಲಿ ಕೂರಿಸಲಾಯಿತು ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೊರೇಶನ್ ಸಂಸ್ಥೆ ತಿಳಿಸಿವೆ.
ಇಟಲಿಯ ವಿಜ್ಞಾನಿ ಜಿಯುಸೆಪ್ ‘ಬೆಪಿ’ ಕೊಲಂಬೊ ಹೆಸರಿನ ಬಾಹ್ಯಾಕಾಶ ನೌಕೆಯು ಸರಿಯಾದ ಕಕ್ಷೆಯಲ್ಲಿದೆ ಹಾಗೂ ಮೊದಲ ಸಂಕೇತವನ್ನು ಕಳುಹಿಸಿದೆ ಎಂದು ಅವು ಹೇಳಿವೆ.
ಅದು 2025 ಡಿಸೆಂಬರ್‌ನಲ್ಲಿ ಗಮ್ಯ ಸ್ಥಾನವನ್ನು ತಲುಪಲಿದೆ. ಅಲ್ಲಿ ಅದು ‘ಬೆಪಿ’ ಮತ್ತು ‘ಮಿಯೊ’ ಎಂಬ ಎರಡು ಶೋಧ ನೌಕೆಗಳನ್ನು ಬುಧ ಗ್ರಹದ ಕಕ್ಷೆಗಳಲ್ಲಿ ಬಿಡುಗಡೆ ಮಾಡಲಿದೆ.





