ಅಪಘಾತದಲ್ಲಿ ಕಾಲು ಕಳೆದುಕೊಂಡ ಬಾಲಕಿಗೆ ದುಪ್ಪಟ್ಟು ಪರಿಹಾರ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು, ಅ.21: ಅಪಘಾತದಲ್ಲಿ ಕಾಲು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದ ಬಾಲಕಿಯ ಪರಿಸ್ಥಿತಿಗೆ ಮರುಗಿರುವ ಹೈಕೋರ್ಟ್, ದುಪ್ಪಟ್ಟು ಪರಿಹಾರ ಕೊಡಿಸುವ ಮೂಲಕ ನತದೃಷ್ಟೆಯ ಪಾಲಿಗೆ ಬೆಳಕು ನೀಡಿದೆ.
ಆರು ವರ್ಷಗಳ ಹಿಂದೆ ನಡೆದಿದ್ದ ಅಪಘಾತದಲ್ಲಿ ಎಡಗಾಲು ಹಾಗೂ ಬಲಗಾಲಿನ ಪಾದ ಕಳೆದಕೊಂಡು, ಶೇ.90ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿದ್ದ ಎಂಟು ವರ್ಷದ ಬಾಲಕಿಗೆ ಕೆಳ ನ್ಯಾಯಾಲಯ ನೀಡಿದ್ದ ಪರಿಹಾರಕ್ಕಿಂತ ಎರಡು ಪಟ್ಟು ಹೆಚ್ಚು ಪರಿಹಾರ ಕೊಡುವಂತೆ ಹೈಕೋರ್ಟ್ ತೀರ್ಪು ನೀಡಿದೆ. ದುಸ್ತರವಾಗಿರುವ ಬಾಲಕಿ ಭವಿಷ್ಯ ಗಮನಿಸಿ ಅಧೀನ ನ್ಯಾಯಾಲಯ ಘೋಷಿಸಿದ್ದ 16 ಲಕ್ಷ ರೂ.ಬದಲಿಗೆ 32 ಲಕ್ಷ ರೂ.ಪರಿಹಾರವನ್ನು ಶೇ.6ರಷ್ಟು ಬಡ್ಡಿಯೊಂದಿಗೆ ನೀಡುವಂತೆ ಆದೇಶಿಸಿದೆ.
ನ್ಯಾ.ರಾಘವೇಂದ್ರ ಎಸ್. ಚೌಹಾಣ್ ನೇತೃತ್ವದ ವಿಭಾಗೀಯ ಪೀಠ ತನ್ನ ತೀರ್ಪಿನುದ್ದಕ್ಕೂ ಬಾಲಕಿಯ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ಬಾಲಕಿಯ ಬಡತನ ಹಾಗೂ ಭವಿಷ್ಯದ ಕುರಿತು ಅನುಕಂಪ ವ್ಯಕ್ತಪಡಿಸಿರುವ ಪೀಠ, ಸಂತ್ರಸ್ತ ವ್ಯಕ್ತಿಗೆ ನೀಡುವ ಪರಿಹಾರ ಕೇವಲ ಆತನ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಅಲ್ಲ. ಅದಕ್ಕಿಂತ ಮಿಗಿಲಾಗಿ ಪರಿಹಾರವು ವ್ಯಕ್ತಿಯ ಘನತೆಯನ್ನು ಯಥಾಸ್ಥಿತಿ ಕಾಪಾಡುವ ಉದ್ದೇಶ ಹೊಂದಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೇ ಹಿನ್ನೆಲೆಯಲ್ಲಿ ಗೂಡಂಗಡಿ ವ್ಯಾಪಾರಿಯಾಗಿರುವ ಬಾಲಕಿ ತಂದೆ ರಾಮ್‌ಲಾಲ್ ಅವರ ಮನವಿ ಪರಿಗಣಿಸಿ ಬೆಂಗಳೂರು ಸಣ್ಣ ಪ್ರಕರಣಗಳ ವಿಚಾರಣಾ ನ್ಯಾಯಾಲಯ ಮತ್ತು ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣದ ನ್ಯಾಯಾಧೀಶರು ನೀಡಿದ್ದ ಪರಿಹಾರ ಮೊತ್ತವನ್ನು ದುಪ್ಪಟ್ಟು ಮಾಡಿ ತೀರ್ಪು ನೀಡಿದೆ. 32 ಲಕ್ಷ ರೂ.ಬಡ್ಡಿ ಸಮೇತ ನೀಡುವಂತೆ ಅಪಘಾತಕ್ಕೆ ಕಾರಣವಾದ ಟ್ರಕ್‌ಗೆ ವಿಮೆ ನೀಡಿದ್ದ ರಿಯಲನ್ಸ್ ಜನರಲ್ ಇನ್ಯೂರೆನ್ಸ್ ಕಂಪೆನಿಗೆ ಆದೇಶಿಸಿದೆ.
ಮಮಕಾರ ತೋರಿದ ಕೋರ್ಟ್: ಬಾಲ್ಯ ಎಂದರೆ ಬರೀ ಮುಗ್ಧತೆಯಿಂದ ಕೂಡಿದ ಅಥವಾ ಬರೀ ಗೆಳೆಯರೊಂದಿಗೆ ಆಟವಾಡುವ ಕಾಲವಲ್ಲ. ಬದಲಿಗೆ ವ್ಯಕ್ತಿಯೊಬ್ಬನ ಇಡೀ ಭವಿಷ್ಯ ರೂಪಿಸುವ ಸಮಯ ಅದು. ಜತೆಗೆ ಬದುಕಿನುದ್ದಕ್ಕೂ ಅನನ್ಯ ನೆನಪುಗಳನ್ನು ಕಟ್ಟಿಕೊಡುವ ಘಟ್ಟ. ಆದರೆ, ಈ ಪ್ರಕರಣದಲ್ಲಿ ಬಾಲಕಿ ತನ್ನ ಒಂದು ಕಾಲು ಮತ್ತು ಮತ್ತೊಂದು ಕಾಲಿನ ಪಾದ ಕಳೆದುಕೊಂಡಿದ್ದಾಳೆ. ಈ ಬಾಲಕಿಗೆ ಸೂಕ್ತ ಪರಿಹಾರ ಸಿಗದೆ ಮತ್ತದೇ ಆರ್ಥಿಕ ಸಂಕಷ್ಟಗಳಲ್ಲಿ ಉಳಿದರೆ ಮುಂದಿನ ಬದುಕಿನಲ್ಲಿ ಜೀವನಾವಶ್ಯಕ ವಸ್ತುಗಳನ್ನು ಖರೀದಿಸುವುದೂ ಕಷ್ಟ. ಅಂಗವೈಕಲ್ಯದ ಜೊತೆಗೆ ಆರ್ಥಿಕ ಸಂಕಷ್ಟಗಳು ಸೇರಿಕೊಂಡರೆ ಮಾನಸಿಕವಾಗಿ ಕುಬ್ಜಳಾಗಿ ಹೋಗುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ಆಕೆಯ ಬದುಕನ್ನು ಖಿನ್ನತೆ ಮತ್ತು ಹತಾಶೆಗಳೇ ಆವರಿಸಿಕೊಂಡು ಬಿಡುತ್ತದೆ.
ಬಾಲಕಿ ಬೆಳೆದು ದೊಡ್ಡವಳಾದ ಮೇಲೆ ಬಹುಮುಖ್ಯವಾಗಿ ಅವಳನ್ನು ಕಾಡುವ ಸಮಸ್ಯೆ ಮದುವೆಯದ್ದು, ಮೊದಲೆ ಲಿಂಗತಾರತಮ್ಯ ಇರುವ ನಮ್ಮ ಸಮಾಜದಲ್ಲಿ ದೈಹಿಕ ನ್ಯೂನತೆ ಇರುವ ಹುಡುಗಿಯರ ಮದುವೆ ನಡೆಯುವುದು ತೀರಾ ಕಷ್ಟ. ಮದುವೆ ನಡೆಯದಿದ್ದರೆ ಬಾಲಕಿಯ ಭವಿಷ್ಯ ಮತ್ತಷ್ಟು ಕತ್ತಲಾಗುತ್ತದೆ. ಇಂತಹ ಸಂದರ್ಭದಲ್ಲಿ ಭಾವನಾತ್ಮಕವಾಗಿ ಕುಗ್ಗಿ ಹೋಗುತ್ತಾಳೆ. ಕನಿಷ್ಟ ಪಕ್ಷ ಆರ್ಥಿಕವಾಗಿಯಾದರೂ ಸದೃಢವಾಗಿದ್ದರೆ ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯ.
ಘಟನೆ ವಿವರ: 2012ರ ಆ.14ರಂದು ಬೆಂಗಳೂರಿನ ಕೂಡ್ಲು ಗೇಟ್ ಬಳಿ ನಡೆದ ಅಪಘಾತದಲ್ಲಿ ಎರಡು ವರ್ಷದ ಬಾಲಕಿ ಲಕ್ಷ್ಮಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದಳು. ಬಾಲಕಿಯ ತಂದೆ ರಾಮ್‌ಲಾಲ್ ಅಂಗಡಿಯ ಬಳಿ ಬಾಲಕಿ ಆಟವಾಡುತ್ತಿದ್ದ ವೇಳೆ ವೇಗವಾಗಿ ಬಂದಿದ್ದ ಟ್ರಕ್ ಬಾಲಕಿಗೆ ಢಿಕ್ಕಿ ಹೊಡೆದು, ನಂತರ ಕಾಲುಗಳ ಮೇಲೆ ಹರಿದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆ.18ರಂದು ಬಾಲಕಿಯ ಒಂದು ಕಾಲನ್ನು ಸಂಪೂರ್ಣವಾಗಿ ಮತ್ತು ಮತ್ತೊಂದು ಕಾಲಿನ ಪಾದವನ್ನು ತೆಗೆಯಲಾಗಿತ್ತು.







