ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನಕ್ಕೆ ಸೂಕ್ತ ಕ್ರಮ: ಕೇರಳ ಐಜಿ

ಪಂಬಾ (ಕೇರಳ), ಅ. 21: ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರು ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಪ್ರವೇಶಿಸಲು ಅನುವಾಗುವಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇರಳ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಎಸ್. ಶ್ರೀಜಿತ್ ರವಿವಾರ ಹೇಳಿದ್ದಾರೆ. ಶಬರಿಮಲೆ ದೇವಾಲಯಕ್ಕೆ ಆಂಧ್ರಪ್ರದೇಶದ ಇಬ್ಬರು ಮಹಿಳೆಯರ ಪ್ರವೇಶಕ್ಕೆ ಪ್ರತಿಭಟನಕಾರರು ತಡೆ ಒಡ್ಡಿದ ಕೆಲವು ಗಂಟೆಗಳ ಬಳಿಕ ಶ್ರೀಜಿತ್ ಈ ಹೇಳಿಕೆ ನೀಡಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಶ್ರೀಜಿತ್, ಅವರು (ಇಬ್ಬರು ಮಹಿಳೆಯರು) ಆಂಧ್ರದ ಯಾತ್ರಾರ್ಥಿಗಳ ಗುಂಪಿನೊಂದಿಗೆ ಬಂದಿದ್ದರು. ಅವರು ಇತರ ದೇವಾಲಯಗಳಿಗೂ ಭೇಟಿ ನೀಡಿದ್ದಾರೆ. ಆದರೆ, ಶಬರಿಮಲೆ ದೇವಾಲಯದ ವಿಶೇಷ ಸಂಪ್ರದಾಯದ ಬಗ್ಗೆ ಅವರಿಗೆ ಅರಿವಿರಲಿಲ್ಲ. ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಅವರಿಗೆ ಕೆಲವರು ಹೇಳಿದ್ದರು. ಅನಂತರ ಅವರು ಶಬರಿಮಲೆ ದೇವಾಲಯಕ್ಕೆ ಹೋಗಲು ಬಯಸುವುದಿಲ್ಲ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ಅನಂತರ ಅವರು ನಿಲಕ್ಕಲ್‌ಗೆ ಹಿಂದಿರುಗಲು ಬಯಸಿದ್ದಾರೆ ಎಂದಿದ್ದಾರೆ.
ಈ ಮಹಿಳೆಯರು ಪಂಪಾದಿಂದ ಬೆಟ್ಟ ಏರುವ ಪ್ರಯತ್ನ ಮಾಡಿದರು. ಆದರೆ, ಪ್ರತಿಭಟನಕಾರರು ಅವರನ್ನು ತಡೆದರು. ಅನಂತರ ಅವರಿಗೆ ಪೊಲೀಸರು ರಕ್ಷಣೆ ನೀಡಿ ನಿಯಂತ್ರಣ ಕೊಠಡಿಗೆ ಕರೆದುಕೊಂಡು ಬಂದರು ಎಂದು ಮೂಲಗಳು ತಿಳಿಸಿವೆ.
ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನಿಸಲು ಕೇರಳ ಪೊಲೀಸರು ಎಲ್ಲ ಪ್ರಯತ್ನ ನಡೆಸಲಿದ್ದಾರೆ. 10ರಿಂದ 50 ವರ್ಷದ ಒಳಗಿನ ಮಹಿಳೆಯರು ದೇವಾಲಯ ಪ್ರವೇಶವನ್ನು ಪ್ರತಿಬಂಧಿಸಲು ಯತ್ನಿಸುವವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗುವುದು ಎಂದು ಶ್ರೀಜಿತ್ ಹೇಳಿದ್ದಾರೆ.







