ದಾವಣಗೆರೆ: ಗಾಳಿಯಲ್ಲಿ ಗುಂಡು ಹಾರಿಸಿ ಆಯುಧ ಪೂಜೆ ಆಚರಣೆ ?
ಕೋವಿ, ರಿವಾಲ್ವರ್, ಚಾಕು, ಲಾಂಗುಗಳ ವೀಡಿಯೊ ವೈರಲ್

ದಾವಣಗೆರೆ, ಅ.21: ಆಯುಧ ಪೂಜೆಯ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹಬ್ಬ ಆಚರಿಸಿದ್ದಾರೆನ್ನಲಾದ ಘಟನೆ ನಗರದ ಹೊರ ವಲಯದ ಕುಂದುವಾಡ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಹೊರ ವಲಯದ ಕುಂದುವಾಡ ಗ್ರಾಮದ ಕುಟುಂಬವೊಂದರ ಬಳಿ 2 ಬಂದೂಕು, ಒಂದು ರಿವಾಲ್ವರ್‌ಗೆ ಲೈಸೆನ್ಸ್ ಹೊಂದಿದ್ದು, ಆಯುಧ ಪೂಜೆ ವೇಳೆ ವಾಹನಗಳು, ಕೃಷಿ ಪರಿಕರಗಳ ಜೊತೆಗೆ 2 ರಿವಾಲ್ವರ್, 9 ಕೋವಿ, ಕೊಡಲಿ, ಲಾಂಗ್, ಚಾಕು ಇಟ್ಟು ಪೂಜೆ ಮಾಡಿರುವ ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಲೈಸೆನ್ಸ್ ಹೊಂದಿರುವ ಬಂದೂಕು, ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡನ್ನು ಹಾರಿಸುವಂತಿಲ್ಲ. ಆದರೆ, ಕುಂದುವಾಡದ ಕುಟುಂಬಸ್ಥರು ಕೋವಿ ಮತ್ತು ರಿವಾಲ್ವರ್‌ನಿಂದ ತಲಾ ಒಂದು ಸುತ್ತು ಗುಂಡು ಹಾರಿಸುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಬಂದೂಕು, ರಿವಾಲ್ವರ್, ಚಾಕು, ಕೊಡಲಿ ಹೀಗೆ ಸಾಕಷ್ಟು ಆಯುಧಗಳ ಸಹಿತ ಇತರ ಉಪಕರಣಗಳನ್ನು ವಾಹನಗಳ ಜೊತೆಗೆ ಮನೆ ಮುಂದೆ ಪ್ರದರ್ಶಿಸಿ, ಪೂಜೆ ಮಾಡಲಾಗಿದೆ. ಪೂಜೆ ಸಂಭ್ರಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ದೃಶ್ಯವನ್ನೂ ಸೆರೆ ಹಿಡಿಯುತ್ತೇನೆಂದು ಯುವಕನೊಬ್ಬ ಹೇಳುತ್ತಾ, ಗಾಳಿಯಲ್ಲಿ ಗುಂಡು ಹಾರಿಸುವ ದೃಶ್ಯವನ್ನು ಸೆರೆ ಹಿಡಿದಿರುವುದೂ ಈಗ ವೈರಲ್ ಆಗಿದೆ. ಶಸ್ತ್ರಾಗಳು, ಆಯುಧಗಳನ್ನು ಪ್ರದರ್ಶಿಸಿರುವ ಮತ್ತು ಗಾಳಿಯಲ್ಲಿ ಗುಂಡು ಹಾರಿಸುವ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ವಿದ್ಯಾನಗರ ಪೊಲೀಸರು ಕುಂದುವಾಡ ಗ್ರಾಮದ ಆ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿದ್ದು, ಬಂದೂಕುಗಳ ಪರವಾನಿಗೆಯನ್ನು ಪೊಲೀಸ್ ಠಾಣೆಗೆ ಒಪ್ಪಿಸಬೇಕೆಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.







