ಸಚಿವರ ವಿರುದ್ಧದ ಭ್ರಷ್ಟಾಚಾರದ ದೂರುಗಳನ್ನು ಬಹಿರಂಗಪಡಿಸಿ: ಕೇಂದ್ರ ಮಾಹಿತಿ ಆಯೋಗ

ಹೊಸದಿಲ್ಲಿ, ಅ. 21: 2014 ಹಾಗೂ 2017ರ ನಡುವೆ ಕೇಂದ್ರ ಸಚಿವರ ವಿರುದ್ಧ ಸ್ವೀಕರಿಸಲಾದ ಭ್ರಷ್ಟಾಚಾರದ ದೂರುಗಳು ಹಾಗೂ ಅವರ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗ ಪ್ರಧಾನ ಮಂತ್ರಿ ಕಚೇರಿ (ಪಿಎಂಒ)ಗೆ ನಿರ್ದೇಶಿಸಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಂಜೀವ್ ಚತುರ್ವೇದಿ ಮನವಿ ಕುರಿತು ತೀರ್ಪು ನೀಡಿರುವ ಮುಖ್ಯ ಮಾಹಿತಿ ಆಯುಕ್ತೆ ರಾಧಾ ಕೃಷ್ಣ ಮಾಥುರ್, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದ ಅವಧಿಯಲ್ಲಿ ವಿದೇಶದಿಂದ ಹಿಂದೆ ತರಲಾದ ಕಪ್ಪು ಹಣದ ಮೌಲ್ಯ, ಪ್ರಮಾಣ ಹಾಗೂ ಈ ದಿಶೆಯಲ್ಲಿ ನಡೆದ ಪ್ರಯತ್ನಗಳ ದಾಖಲೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಪಿಎಂಒಗೆ ನಿರ್ದೇಶಿಸಿದ್ದಾರೆ.
ವಿದೇಶದಿಂದ ಹಿಂದೆ ತಂದ ಕಪ್ಪು ಹಣವನ್ನು ಭಾರತೀಯ ನಾಗರಿಕರ ಬ್ಯಾಂಕ್ ಖಾತೆಗಳಲ್ಲಿ ಸರಕಾರ ಠೇವಣಿ ಇರಿಸಿರುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೂಡ ಬಹಿರಂಗಗೊಳಿಸುವಂತೆ ಅವರು ಪಿಎಂಒಗೆ ಆದೇಶಿಸಿದ್ದಾರೆ.
ಚತುರ್ವೇದಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮಾಹಿತಿ ಹಕ್ಕು ಕಾಯ್ದೆ ಅಡಿ ‘ಮಾಹಿತಿ’ ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಕಪ್ಪು ಹಣ ಒಳಗೊಳ್ಳುವುದಿಲ್ಲ ಎಂದು ಪಿಎಂಒ ಹೇಳಿದೆ. ಆದರೆ, ಈ ಪ್ರತಿಪಾದನೆಯನ್ನು ಮಾಹಿತಿ ಆಯುಕ್ತರು ನಿರಾಕರಿಸಿದ್ದಾರೆ.
ಮಾಹಿತಿ ಹಕ್ಕು ಅರ್ಜಿಯಲ್ಲಿ ಚತುರ್ವೇದಿ ಅವರು ಬಿಜೆಪಿ ಸರಕಾರದ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ವಚ್ಛ ಭಾರತ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಂದ ಬಿಜೆಪಿ ಸರಕಾರ ವಿವಿಧ ಯೋಜನೆಗಳ ಬಗ್ಗೆ ವಿವರ ಕೋರಿದ್ದರು. ಪಿಎಂಒನಿಂದ ಸರಿಯಾದ ಮಾಹಿತಿ ಲಭ್ಯವಾಗದೇ ಇದ್ದಾಗ ಮಾಹಿತಿ ಹಕ್ಕಿಗೆ ಇರುವ ಅತ್ಯುಚ್ಛ ಪ್ರಾಧಿಕಾರ ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.