Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮನಸ್ಸು ಕಟ್ಟಿದ ಬಂಡಾಯ ಜಗದ್ಗುರು

ಮನಸ್ಸು ಕಟ್ಟಿದ ಬಂಡಾಯ ಜಗದ್ಗುರು

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ22 Oct 2018 12:10 AM IST
share
ಮನಸ್ಸು ಕಟ್ಟಿದ ಬಂಡಾಯ ಜಗದ್ಗುರು

ಬಂಡಾಯ ಸಾಹಿತ್ಯ ಸಮ್ಮೇಳನ ಎಲ್ಲೇ ನಡೆದರೂ ಶ್ರೀಗಳು ಅಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂತಹ ಬಂಡಾಯ ಜಗದ್ಗುರು ಈಗ ನಿರ್ಗಮಿಸಿದ್ದಾರೆ. ದೇಶ ಫ್ಯಾಶಿಸಂನತ್ತ ದಾಪುಗಾಲು ಇಡುತ್ತಿರುವಾಗ, ಕಣ್ಣೆದುರು ಕಗ್ಗತ್ತಲು ಕವಿಯುತ್ತಿರುವಾಗ, ಇಂತಹ ಸ್ವಾಮಿಗಳ ನಿರ್ಗಮನ ಸೃಷ್ಟಿಸುವ ಶೂನ್ಯವನ್ನು ತುಂಬುವುದು ಕಷ್ಟ.


ಹುಟ್ಟಿದ ಜೀವಿ ಸಾಯಲೇಬೇಕು. ಇದು ನಿಸರ್ಗದ ನಿಯಮ. ನಮ್ಮ ಸಮಾಜದಲ್ಲಿ ಸಾವುಗಳು ಸಂಭವಿಸಿದಾಗ, ತುಂಬಲಾಗದ ನಷ್ಟ ಎಂಬ ಮಾತು ಸಾಕಷ್ಟು ಬಳಕೆಯಾಗುತ್ತದೆ. ಅದರಲ್ಲೂ ಅಧಿಕಾರದಲ್ಲಿ ಇದ್ದವರು, ಹಣವಂತರು, ಉದ್ಯಮಪತಿಗಳು ಸತ್ತಾಗ, ಇಂತಹ ಮಾತು ಸಾಮಾನ್ಯವಾಗಿರುತ್ತದೆ. ವಾಸ್ತವವಾಗಿ, ಅನೇಕ ಸಾವುಗಳಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿರುವುದಿಲ್ಲ. ಸಂಬಂಧಿಕರಿಗೆ ಮಾತ್ರ ನೋವು ಆಗಿರುತ್ತದೆ. ಕ್ರಮೇಣ ಅದು ಮರೆತು ಹೋಗುತ್ತದೆ. ಆದರೆ, ಎಲ್ಲಾ ಸಾವುಗಳ ಬಗ್ಗೆ ಹೀಗೆ ಹೇಳಲು ಆಗುವುದಿಲ್ಲ. ಕೆಲ ಅಮೂಲ್ಯ ವ್ಯಕ್ತಿಗಳ ಸಾವು ಸೃಷ್ಟಿಸುವ ಶೂನ್ಯವನ್ನು ತುಂಬುವುದು ತುಂಬಾ ಕಷ್ಟ. ಕಳೆದ ಶನಿವಾರ ಕೊನೆಯುಸಿರೆಳೆದ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಯವರ ಸಾವು ನಾಡಿಗೆ ನಿಜಕ್ಕೂ ತುಂಬಲಾಗದ ನಷ್ಟ.

ನಮ್ಮ ಸಮಾಜದಲ್ಲಿ ಅನೇಕ ಸ್ವಾಮಿಗಳು, ಮಠಾಧೀಶರು, ಜಗದ್ಗುರುಗಳು ಇದ್ದಾರೆ. ಅವರು ಅವರದ್ದೇ ಜಾತಿ, ಅವರದ್ದೇ ಪುಟ್ಟ ಜಗತ್ತಿಗೆ ಗುರುವಾಗಿರುತ್ತಾರೆ. ಅನೇಕ ಮಠಗಳಲ್ಲಿ ಇಂಥವರು ತಮ್ಮ ಘನತೆಗೆ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಾರೆ. ಅನಾಚಾರ, ಅತ್ಯಾಚಾರಗಳಿಗೆ ಕುಖ್ಯಾತರಾಗುತ್ತಾರೆ. ನಮ್ಮ ಕಣ್ಣೆದುರೇ ಆಸಾರಾಮನಂತಹ ಡೋಂಗಿ ಸನ್ಯಾಸಿಗಳನ್ನು ನೋಡಿದ್ದೇವೆ. ಮಠಗಳಲ್ಲಿ ತೊಟ್ಟಿಲು ಕಟ್ಟಿದ, ತೀರ್ಥ ಸೇವನೆ ಮಾಡಿದ ಮಠಾಧೀಶರು ಇದ್ದಾರೆ. ತಮ್ಮ ಅನಾಚಾರಕ್ಕೆ ಧಕ್ಕೆ ಬಂದಾಗ, ಧರ್ಮಕ್ಕೆ ಗಂಡಾಂತರ ಬಂದಿದೆ ಎಂದು ಹುಯಿಲೆಬ್ಬಿಸುತ್ತಾರೆ. ಆದರೆ ಮೊನ್ನೆ ನಮ್ಮನ್ನು ಅಗಲಿದ ಗದುಗಿನ ತೋಂಟದಾರ್ಯ ಸ್ವಾಮೀಜಿಯವರು ನಿಜಕ್ಕೂ ಪ್ರಾತಃಸ್ಮರಣೀಯರು. ಸ್ವಾಮಿ ವಿವೇಕಾನಂದರಂತೆ ಜಾತಿ, ಮತ ಮೀರಿ ಎಲ್ಲರನ್ನೂ ಪ್ರೀತಿಸುವ ಮಹಾನ್ ಚೇತನ. ಗದುಗಿನ ಸ್ವಾಮೀಜಿ ಬರೀ ಪುರಾಣ, ಪ್ರವಚನ ಹೇಳುತ್ತ ಮಠದಲ್ಲಿ ಕೂರಲಿಲ್ಲ. ತಾವು ನಂಬಿದ ಬಸವ ಸಿದ್ಧಾಂತವನ್ನು ಮನೆಮನೆಗೆ ತಲುಪಿಸಲು ತಮ್ಮ ಬದುಕನ್ನೇ ಸಮರ್ಪಿಸಿಕೊಂಡರು. ದಯವೇ ಧರ್ಮದ ಮೂಲವಯ್ಯ ಎಂಬ ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು.

ಕನ್ನಡ ಭಾಷೆ, ಪುಸ್ತಕ ಪ್ರೀತಿ, ಜೀವಪರ ಕಾಳಜಿ, ಜನಪರ ಹೋರಾಟಗಳಿಗೆ ಹೆಸರಾಗಿದ್ದ ಶ್ರೀಗಳನ್ನು ಪುಸ್ತಕ ಜಗದ್ಗರು ಮತ್ತು ಕನ್ನಡ ಜಗದ್ಗುರು ಎಂದು ಜನರು ಕರೆಯುತ್ತಿದ್ದಾರೆ. ಅಲ್ಲಮಪ್ರಭು ಸಂಪ್ರದಾಯದ ಯಡೆಯೂರು ತೋಂಟದ ಶಿವಯೋಗ ಪರಂಪರೆಯಲ್ಲಿ 19ನೇ ಸ್ವಾಮಿಯಾಗಿ 1974ರಲ್ಲಿ ಗದುಗಿನ ಮಠದ ಅಧಿಕಾರ ವಹಿಸಿಕೊಂಡಾಗ ಅವರಿಗೆ 25 ವರ್ಷ.

ನಾಡಿಗೆ ಬಸವಣ್ಣನವರನ್ನು ನೀಡಿದ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೊರವಾರ ಗ್ರಾಮದಲ್ಲಿ ಜನಿಸಿದ ಶ್ರೀಗಳು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಓದುವಾಗ, ತಮ್ಮ ಗುರುಗಳಾಗಿದ್ದ ಎಂ.ಎಂ. ಕಲಬುರ್ಗಿಯವರಿಂದ ಕನ್ನಡ ಸಾಹಿತ್ಯ ಮತ್ತು ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಷಯ ತಿಳಿದುಕೊಂಡರು. ಹೆಚ್ಚೆಚ್ಚು ಓದತೊಡಗಿದರು. ನಿಡುಮಾಮಿಡಿ ಶ್ರೀಗಳಂತೆ ತೋಂಟದಾರ್ಯ ಸ್ವಾಮೀಜಿಯವರು ಕೂಡ ಕೋಮು ಸೌಹಾರ್ದ, ಸಮಾನತೆಯ ಚಳವಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಬರೀ ಧಾರ್ಮಿಕ ಬೋಧಕರಾಗಿ ಉಳಿಯದೇ ಸಾರ್ವಜನಿಕ ಹೋರಾಟಗಳಲ್ಲಿ ತೊಡಗಿಸಿಕೊಂಡರು. ಮುಂಡರಗಿ ಭಾಗದಲ್ಲಿ ಬಾಗದಲ್ಲಿ ದಕ್ಷಿಣ ಆಫ್ರಿಕಾದ ಬಹುರಾಷ್ಟ್ರೀಯ ಕಂಪೆನಿ ಪೋಸ್ಕೊ ರೈತರ 6 ಸಾವಿರ ಎಕರೆ ಜಮೀನು ನುಂಗಿ, ಉಕ್ಕಿನ ಕೈಗಾರಿಕೆ ಘಟಕ ತೆರೆಯಲು ಮುಂದಾದಾಗ, ಅದನ್ನು ವಿರೋಧಿಸಿ ಸ್ವಾಮಿಗಳು ಪ್ರಗತಿಪರ ಸಂಘಟನೆಗಳ ಜೊತೆ ಸೇರಿ ಜನಾಂದೋಲನ ಸಂಘಟಿಸಿದರು. ಆಗ ರಾಜ್ಯದಲ್ಲಿ ಯಡಿಯೂರಪ್ಪ ಸರಕಾರ ಇತ್ತು. ಸರಕಾರದ ಒತ್ತಡಕ್ಕೂ ಶ್ರೀಗಳು ಮಣಿಯಲಿಲ್ಲ. ಕೊನೆಗೆ ಬಹುರಾಷ್ಟ್ರೀಯ ಕಂಪೆನಿ ರೈತರ ಚಳವಳಿಗೆ ಹೆದರಿ ಪಲಾಯನ ಮಾಡಿತು. ಈ ಹೋರಾಟದಲ್ಲಿ ಮೇಧಾ ಪಾಟ್ಕರ್ ಪಾಲ್ಗೊಂಡಿದ್ದರು.

ಉತ್ತರ ಕರ್ನಾಟಕದ ಔಷಧಿ ಸಸಿಗಳ ತಾಣವೆಂದೇ ಹೆಸರಾದ, ಖನಿಜ ಸಂಪತ್ತುಗಳಿಂದ ಕೂಡಿದ ಗದಗ ಸಮೀಪದ ಕಪ್ಪತ್ತಗುಡ್ಡ ಅರಣ್ಯಪ್ರದೇಶವನ್ನು ನುಂಗಲು ಮೈನಿಂಗ್ ಮಾಫಿಯಾ ಹೊಂಚು ಹಾಕಿದಾಗ, ಅದರ ವಿರುದ್ಧ ದೊಡ್ಡ ಜನಾಂದೋಲನ ಸಂಘಟಿಸಿದ ತೋಂಟದಾರ್ಯ ಶ್ರೀಗಳು ಕೊನೆಗೂ ಕಪ್ಪತ್ತಗುಡ್ಡ ಉಳಿಸಿಕೊಂಡರು. ಉತ್ತರ ಕರ್ನಾಟಕದ ಪಶ್ಚಿಮಘಟ್ಟವೆಂದೇ ಕರೆಯಲಾಗುವ ಕಪ್ಪತ್ತಗುಡ್ಡ ಇರುವುದರಿಂದಲೇ ಆ ಭಾಗದಲ್ಲಿ ಒಂದಿಷ್ಟು ಮಳೆ, ಬೆಳೆ ಬರುತ್ತದೆ. ಇದನ್ನು ಉಳಿಸಿಕೊಳ್ಳಲು ಸ್ವಾಮೀಜಿ ನಡೆಸಿದ ಹೋರಾಟ ರೋಮಾಂಚಕವಾದದ್ದು. ತೋಂಟದ ಶ್ರೀಗಳು ಮಠದಲ್ಲಿ ಅಧಿಕಾರ ವಹಿಸಿಕೊಂಡ ನಂತರ 80ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಮಠದ ಆಸ್ತಿಯನ್ನು ಹೆಚ್ಚಿಸಿದರು ಎಂಬುದಕ್ಕಿಂತ ಜಾತಿ, ಮತ, ಕುಲ ನೋಡದೆ ಮೇಲು ಕೀಳಿಲ್ಲದೆ ಎಲ್ಲರನ್ನೂ ಪ್ರೀತಿಸಿದರು ಎಂಬ ಕಾರಣಕ್ಕಾಗಿ ಅವರು ಉಳಿದವರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ದಮನಿತರ, ದಲಿತರ ನೋವು, ಸಂಕಟಗಳಿಗೆ ಸ್ಪಂದಿಸಿದ ಕಾರಣಕ್ಕಾಗಿ ಅವರು ನಮ್ಮೆಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ. ತೋಂಟದಾರ್ಯ ಶ್ರೀಗಳು 1874ರಲ್ಲಿ ಅಧಿಕಾರ ವಹಿಸಿಕೊಂಡಾಗ, ಮಠದ ಮುಂದೆ ಲಿಂಗಧಾರಿಗಳಿಗೆ ಮಾತ್ರ ಪ್ರವೇಶ ಎಂಬ ಫಲಕವಿತ್ತು. ಅದನ್ನು ನೋಡಿದ ಶ್ರೀಗಳು, ಮೊದಲು ಮಾಡಿದ ಕೆಲಸ ಅದನ್ನು ಕಿತ್ತು ಬಿಸಾಡಿದ್ದು. ಈ ಮಠದ ಜಗದ್ಗರುಗಳು ಮನುಷ್ಯರು ಹೊತ್ತುಕೊಳ್ಳುವ ಅಡ್ಡಪಲ್ಲಕ್ಕಿ ಮೇಲೆ ಮೊವಣಿಗೆ ಹೊರಡುತ್ತಿದ್ದರು. ಇದನ್ನು ತಿರಸ್ಕರಿಸಿದ ತೋಂಟದಾರ್ಯರು ಅಡ್ಡಪಲ್ಲಕ್ಕಿ ಮೇಲೆ ಬಸವಣ್ಣನವರ ವಚನ ಸಾಹಿತ್ಯದ ಗಂಟನ್ನು ಇಟ್ಟು ನಡೆಯುತ್ತ ಮೊವಣಿಗೆಯಲ್ಲಿ ಹೊರಟರು.

ಕೇವಲ ಒಂದು ಜಾತಿ ಮತ್ತು ಸಮುದಾಯಕ್ಕೆ ಸೀಮಿತವಾಗಿದ್ದ ತೋಂಟದಾರ್ಯ ಮಠವನ್ನು ಸರ್ವಜನಾಂಗದ ತಾಣವಾಗಿ ಬೆಳೆಸಿದರು. ಮಠದಲ್ಲಿ ಬಸವ ಜಯಂತಿ ಮಾತ್ರವಲ್ಲದೆ ಏಸು, ಪೈಗಂಬರ್, ಮಹಾವೀರ, ಬುದ್ಧ, ಅಂಬೇಡ್ಕರ್ ಜಯಂತಿಯನ್ನು ಅವರು ಆಚರಿಸುತ್ತಿದ್ದರು. ಇದರಿಂದಾಗಿ, ಸಂಘ ಪರಿವಾರದ ಕೋಮುವಾದಿ ಸಂಘಟನೆಗಳೊಂದಿಗೆ ಅವರಿಗೆ ಮುಂಚಿನಿಂದಲೂ ಹೊಂದಾಣಿಕೆ ಆಗಲೇ ಇಲ್ಲ. ಪೇಜಾವರ ಶ್ರೀಗಳು ಅನೇಕ ಬಾರಿ ಕರೆದಾಗಲೂ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ತೋಂಟದಾರ್ಯ ಶ್ರೀಗಳು ಭಾಗವಹಿಸಲಿಲ್ಲ. ಜಗತ್ತಿನ ಸಕಲ ಜೀವಾತ್ಮರಲ್ಲಿ ಲೇಸನ್ನು ಬಯಸುವ, ಬಸವ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ ಶ್ರೀಗಳಿಗೆ ಹಿಂದೂಗಳು ಮಾತ್ರ ಒಂದಾಗಬೇಕು ಎಂಬ ವಾದದ ಬಗ್ಗೆ ಆಕ್ಷೇಪವಿತ್ತು. 2001ನೇ ಇಸವಿಯ ಆ ಘಟನೆ ನನಗಿನ್ನೂ ನೆನಪಿದೆ.

ಗದುಗಿನ ತೋಂಟದಾರ್ಯ ಜಾತ್ರಾ ಮಹೋತ್ಸವದ ಸಿದ್ಧತಾ ಸಮಿತಿಗೆ ಮುಸಲ್ಮಾನ ಸಮಾಜಕ್ಕೆ ಸೇರಿದ ವ್ಯಕ್ತಿಯೊಬ್ಬರನ್ನು ಶ್ರೀಗಳು ಅಧ್ಯಕ್ಷರನ್ನಾಗಿ ನೇಮಿಸಿದರು. ಆ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಆಗಿನ ಬಿಜೆಪಿ ಸಂಸದರೊಬ್ಬರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಹಿಂದೂಗಳ ಉತ್ಸವ ಸಮಿತಿಗೆ ಮುಸ್ಲಿಮರು ಯಾಕೆ ಎಂದು ಕೇಳಿದರು. ಆಗ ಅವರನ್ನು ತರಾಟೆಗೆ ತೆಗೆದುಕೊಂಡ ತೋಂಟದಾರ್ಯ ಶ್ರೀಗಳು, ‘ನೀವು ಲೋಕಸಬಾ ಸದಸ್ಯರು. ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೀರಿ. ಒಬ್ಬ ಆರೆಸ್ಸೆಸ್ ಕಾರ್ಯಕರ್ತರಂತೆ ಮಾತನಾಡುವುದು ಸರಿಯಲ್ಲ’ ಎಂದು ಹೇಳಿದರು. ಈ ಸಭೆ ನಡೆದ ಮರು ದಿನ, ಕೆಲ ಪತ್ರಿಕೆಗಳು ತೋಂಟದಾರ್ಯ ಸ್ವಾಮೀಜಿ ವಿರದ್ಧ ದಾಳಿಯನ್ನು ಆರಂಭಿಸಿದವು. ಈ ಮಠದ ಪೀಠದಿಂದ ಅವರನ್ನು ಉಚ್ಚಾಟಿಸಬೇಕೆಂದು ಚಳವಳಿ ಆರಂಭವಾಯಿತು. ಆದರೆ, ಸ್ವಾಮೀಜಿ ಮಣಿಯಲಿಲ್ಲ. ಆಗ ಜನವಾಹಿನಿ ಪತ್ರಿಕೆಯಲ್ಲಿದ್ದ ನಾನು ಲಿಂಗಾಯತ ಸ್ವಾಮಿಗಳ ವಿರುದ್ಧ ಸಂಘ ಪರಿವಾರದ ಸಂಚು ಎಂಬ ಮುಖಪುಟದ ಲೇಖನ ಬರೆದೆ.

ಅದು ಸ್ವಾಮಿಗಳ ಗಮನಕ್ಕೆ ಬಂದು, ಪತ್ರಿಕೆಯನ್ನು ಗದುಗಿಗೆ ತರಿಸಿಕೊಂಡು ಓದಿ, ಪ್ರತಿಕ್ರಿಯಿಸಿದರು. ಅದೇ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ಸ್ವಾಮೀಜಿ ಪರವಾಗಿ ಬಿಜೆಪಿ ಸಂಸದರನ್ನು ಟೀಕಿಸಿ, ಲೇಖನ ಪ್ರಕಟಿಸಿದರು. ನಾಡಿನ ವೈಚಾರಿಕ ಲೋಕ ಸ್ವಾಮಿಗಳಿಗೆ ಬೆಂಬಲವಾಗಿ ನಿಂತ ಪರಿಣಾಮವಾಗಿ ಅವರನ್ನು ಉಚ್ಚಾಟಿಸುವ ಯತ್ನ ವಿಫಲಗೊಂಡಿತು. ಈ ಘಟನೆ ನಡೆಯುವ ಮುಂಚೆಯೇ ಗದುಗಿನ ಶ್ರೀಗಳ ಬಗ್ಗೆ ನನಗೆ ಗೊತ್ತಿತ್ತು. 1974ರಲ್ಲಿ ನಮ್ಮೂರು ಸಾವಳಗಿಯಲ್ಲಿ ದಲಿತ ಮಹಿಳೆಯರನ್ನು ಅವಮಾನಿಸುವ ಅನಿಷ್ಟ ಸಂಪ್ರದಾಯದ ವಿರುದ್ಧ ನಾನು ಜನಮನಕ್ಕೆ ಬರೆದ ಪತ್ರ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಖಾದ್ರಿ ಶಾಮಣ್ಣ ಅವರ ಕೈಗೆ ಸಿಕ್ಕಿ, ಮುಖಪುಟದಲ್ಲಿ ಪ್ರಕಟವಾಯಿತು. ಇದಾಗಿ, ತುಂಬಾ ವರ್ಷಗಳ ನಂತರ ಭೇಟಿಯಾದ ಸ್ವಾಮೀಜಿ ಪದೇ ಪದೇ ಆ ಪತ್ರವನ್ನು ನೆನಪಿಸಿ, ಅದನ್ನು ಮೆಚ್ಚಿಕೊಂಡರು.

2004ರಲ್ಲಿ ಬೆಂಗಳೂರಿನಲ್ಲಿ ಕೋಮು ಸೌಹಾರ್ದ ವೇದಿಕೆ ಏರ್ಪಡಿಸಿದ್ದ ಕೋಮು ಸೌಹಾರ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶ್ರೀಗಳು ನನ್ನ ಕೋಮು ದಳ್ಳುರಿ’ ಪುಸ್ತಕವನ್ನು ಬಿಡುಗಡೆ ಮಾಡಿ, ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡ ನಂತರ ತೀವ್ರ ಆತಂಕಗೊಂಡಿದ್ದ ಶ್ರೀಗಳು ತಮ್ಮ ಭಾಷಣಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಮುಂಡರಗಿಯ ತಮ್ಮ ಶಾಖಾಮಠದಲ್ಲಿ ಮುಸ್ಲಿಮರಿಗೆ ಮಸೀದಿ ನಿರ್ಮಿಸಿಕೊಳ್ಳಲು ನಿವೇಶನವನ್ನು ಉಚಿತವಾಗಿ ನೀಡಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿದ್ದ ಅವರು ಬಾಬಾ ಸಾಹೇಬರ ವಿಚಾರಗಳನ್ನು ಜನರಿಗೆ ತಲುಪಿಸಲು ಬಾಮಿನಿಷಟ್ಪದಿಯಲ್ಲಿ ರಾಮಣ್ಣ ಬ್ಯಾಟಿಯವರಿಂದ ಅಂಬೇಡ್ಕರ್ ಪುರಾಣವನ್ನು ಬರೆಸಿ, ಮಠದ ಪ್ರಕಾಶನದಿಂದ ಪ್ರಕಟಿಸಿದರು. ಶ್ರಾವಣ ಮಾಸದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಪುರಾಣ ಮತ್ತು ಕೀರ್ತನೆಗಳಲ್ಲಿ ಬಸವ ಪುರಾಣದ ಜೊತೆಗೆ ಅಂಬೇಡ್ಕರ್ ಪುರಾಣವನ್ನು ಕೇಳುವ ವ್ಯವಸ್ಥೆ ಮಾಡಿದರು.

ಅನೇಕ ದಲಿತ ಕೇರಿಗಳನ್ನು, ಲಂಬಾಣಿ ತಾಂಡಾಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸಿದರು. ಗದುಗಿನ ಸ್ವಾಮಿಗಳ ದಲಿತ ಕಾಳಜಿ ಬರೀ ಬಾಯಿಮಾತಿಗೆ ಸೀಮಿತವಾಗಿರಲಿಲ್ಲ. ಲಿಂಗಾಯತ ಮಠಗಳಿಗೆ ದಲಿತ ಉತ್ತರಾಧಿಕಾರಿಗಳನ್ನು ನೇಮಿಸಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದರು. ಇಳಕಲ್ ಮಹಾಂತ ಶಿವಯೋಗಿಗಳು ತಮ್ಮ ಮಠಕ್ಕೆ ದಲಿತ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಹೊರಟಾಗ, ಜಾತಿವಾದಿ ಶಕ್ತಿಗಳಿಂದ ಅವರ ಮೇಲೆ ದೊಡ್ಡ ದಾಳಿಯೇ ನಡೆಯಿತು. ಆಗ ಗದುಗಿನ ಶ್ರೀಗಳು ಅವರ ಬೆಂಬಲಕ್ಕೆ ನಿಂತರು. ಇದರಿಂದಾಗಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಶಿವಯೋಗ ಮಂದಿರದಲ್ಲಿ ಪಾಲ್ಗೊಳ್ಳಲು ಅವರು ಬಂದಾಗ, ಬಾಗಲಕೋಟೆಯ ಕೋಮುವಾದಿ ಸಂಘಟನೆಯ ನಾಯಕನೊಬ್ಬ ಅವರ ವಾಹನದ ಮೇಲೆ ಕಲ್ಲು ತೂರಾಟ ಮಾಡಿಸಿದ. ಡಾ. ಕಲಬುರ್ಗಿಯವರ ಹತ್ಯೆಯಾದ ನಂತರ ತೀವ್ರ ಆತಂಕಗೊಂಡಿದ್ದ ಶ್ರೀಗಳು ಆ ಆಘಾತದಿಂದ ಚೇತರಿಸಲು ತುಂಬಾ ಸಮಯ ತೆಗೆದುಕೊಂಡರು. ಆದರೆ ಅವರ ಆರೋಗ್ಯ ಕೈಕೊಡುತ್ತಲೇ ಬಂತು. ಆದರೂ ಇಷ್ಟು ಬೇಗ ಅವರು ನಿರ್ಗಮಿಸುವರು ಎಂದು ಅಂದುಕೊಂಡಿರಲಿಲ್ಲ. ಮಂದಿರ, ಮಸೀದಿ ಕಟ್ಟುವ, ಕೆಡವುವ ಕ್ರಿಯೆಯಲ್ಲಿ ನಂಬಿಕೆಯಿಲ್ಲದ ಶ್ರೀಗಳು ಮನಸ್ಸು ಕಟ್ಟಲು, ಕನಸು ಕಟ್ಟಲು, ಭಾವೈಕ್ಯದ ಬಳ್ಳಿಯನ್ನು ಹಬ್ಬಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಮಠದ ಶಿವಾನುಭವ ವೇದಿಕೆ ಹಿಂದೂ, ಮುಸ್ಲಿಂ, ಕ್ರೈಸ್ತರ ಸೌಹಾರ್ದ ತಾಣವಾಯಿತು. ಇದನ್ನು ಗಮನಿಸಿದ ಕೇಂದ್ರ ಸರಕಾರ 2001ರಲ್ಲಿ ಕೋಮು ಸೌಹಾರ್ದ ಪ್ರಶಸ್ತಿ ನೀಡಿತು.

ಎಲ್ಲಾ ಮತ ಧರ್ಮಗಳಿಗಿಂತ, ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಶ್ರೇಷ್ಠ ಎಂದು ಹೇಳುತ್ತಿದ್ದ ಶ್ರೀಗಳನ್ನು ಕನ್ನಡ ಸಾರಸ್ವತ ಲೋಕದ ಅನೇಕರು ಬಂಡಾಯ ಜಗದ್ಗುರು ಎಂದು ಕರೆಯುತ್ತಿದ್ದರು. ಬಂಡಾಯ ಸಾಹಿತ್ಯ ಸಮ್ಮೇಳನ ಎಲ್ಲೇ ನಡೆದರೂ ಶ್ರೀಗಳು ಅಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂತಹ ಬಂಡಾಯ ಜಗದ್ಗುರು ಈಗ ನಿರ್ಗಮಿಸಿದ್ದಾರೆ. ದೇಶ ಫ್ಯಾಶಿಸಂನತ್ತ ದಾಪುಗಾಲು ಇಡುತ್ತಿರುವಾಗ, ಕಣ್ಣೆದುರು ಕಗ್ಗತ್ತಲು ಕವಿಯುತ್ತಿರುವಾಗ, ಇಂತಹ ಸ್ವಾಮಿಗಳ ನಿರ್ಗಮನ ಸೃಷ್ಟಿಸುವ ಶೂನ್ಯವನ್ನು ತುಂಬುವುದು ಕಷ್ಟ.

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X