ನಾಲ್ಕು ವರ್ಷದ ಮಗು ನಾಪತ್ತೆ

ಮಂಗಳೂರು, ಅ.22: ಕಲಬುರ್ಗಿ ಮೂಲದ ಸೇಡಂ ನಿವಾಸಿ ಸೈಯದ್ ಇಬ್ರಾಹೀಂ ಎಂಬರ ಪುತ್ರಿ ನಾಲ್ಕು ವರ್ಷದ ಮೈಮೂನಾ ಜಬೀನ್ ಕಾಣೆಯಾದ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾನಸಿಕ ಅಸ್ವಸ್ಥರಾಗಿದ್ದ ಸೈಯದ್ ಇಬ್ರಾಹೀಂ ಪತ್ನಿ ಬಿಸ್ಮಿಲ್ಲಬಿ 2016ನೇ ಸೆಪ್ಟಂಬರ್‌ನಲ್ಲಿ ನಾಲ್ಕು ವರ್ಷದ ಮಗುವನ್ನು ತನ್ನ ಮನೆಯಿಂದ ಕರೆದುಕೊಂಡು ಹೋಗಿದ್ದರು. ಒಂದು ತಿಂಗಳ ಹಿಂದೆ ವಾಡಿ ಎಂಬಲ್ಲಿನ ದರ್ಗಾದ ಬಳಿ ಪತ್ನಿ ಬಿಸ್ಮಿಲ್ಲಾಬಿ ಪತ್ತೆಯಾಗಿದ್ದರು.
ಪತ್ನಿಯ ಬ್ಯಾಗ್‌ನಲ್ಲಿ ಮಗು ಮೈಮೂನಾ ಹೆಸರಿನ ಮಂಗಳೂರು ಸರಕಾರಿ ವೆನ್‌ಲಾಕ್ ಆಸ್ಪತೆಯ ಹೊರರೋಗಿ ಚೀಟಿ ಇರುವುದು ಕಂಡುಬಂದಿದ್ದು, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 2016ರ ಡಿ.6ರಂದು ಪ್ರಕರಣ ದಾಖಲಿಸಲಾಗಿತ್ತು. ಹೆಣ್ಣು ಮಗು ಮೈಮೂನಾ ಈ ವರೆಗೂ ಪತ್ತೆಯಾಗಿಲ್ಲ.
ಚಹರೆ: ಗೋದಿ ಮೈಬಣ್ಣ, ದುಂಡು ಮುಖ, ಸುಮಾರು 2.5 ಅಡಿ ಎತ್ತರ, ಸಪೂರ ಶರೀರ, ಉರ್ದು ಭಾಷೆ ಮಾತನಾಡುತ್ತಾರೆ.
ನಾಪತ್ತೆಯಾದ ಮಗುವಿನ ಚಹರೆ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ (0824- 2220518) ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.





