ಸಿ.ಎಸ್.ಪುಟ್ಟರಾಜು ರಾಜೀನಾಮೆ ನೀಡಿದ್ದೇಕೆ?: ಸಿದ್ದರಾಮಯ್ಯರಿಗೆ ಬಿಜೆಪಿಯ ರವಿಕುಮಾರ್ ಪ್ರಶ್ನೆ

ಬೆಂಗಳೂರು, ಅ. 22: ಶ್ರೀರಾಮುಲು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇಕೆಂದು ಪ್ರಶ್ನಿಸುವ ಮಾಜಿ ಸಿಎಂ ಸಿದ್ದರಾಮಯ್ಯ, ಅದೇ ಪ್ರಶ್ನೆಯನ್ನು ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುವ ವೇಳೆ ಸಿ.ಎಸ್. ಪುಟ್ಟರಾಜು ಅವರಿಗೂ ಕೇಳುವರೇ? ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.
ಯಾರು ಲೋಕಸಭೆ ಅಥವಾ ವಿಧಾನಸಭೆಗೆ ಹೋಗಬೇಕೆಂಬುದನ್ನು ನಿರ್ಧರಿಸುವವರು ಮತದಾರರೇ ಹೊರತು ಸಿದ್ಧರಾಮಯ್ಯನವರಲ್ಲ. ಬಹುಮತದಿಂದ ಆಯ್ಕೆಯಾದವರನ್ನು ಲೋಕಸಭೆ ಅಥವಾ ವಿಧಾನಸಭೆಗೆ ಏಕೆ ಹೋಗಬೇಕೆಂಬುದನ್ನು ಪ್ರಶ್ನಿಸುವುದು ಅವರನ್ನು ಆಯ್ಕೆ ಮಾಡಿದ ಮತದಾರರಿಗೆ ಮಾಡುವ ಅಪಮಾನ ಎಂದು ರವಿಕುಮಾರ್ ಟೀಕಿಸಿದ್ದಾರೆ.
ತಮ್ಮ ಸ್ವಂತ ಕ್ಷೇತ್ರದಲ್ಲೆ ಜನರಿಂದ ತಿರಸ್ಕರಿಸಲ್ಪಟ್ಟ ಸಿದ್ದರಾಮಯ್ಯನವರಿಂದು ಚುನಾಯಿತ ಪ್ರತಿನಿಧಿಗಳ ವಿರುದ್ಧ ಮಾತನಾಡುವುದು ಅವರಿಗೆ ಶೋಭೆಯಲ್ಲ. ತನ್ನ ಕ್ಷೇತ್ರದಲ್ಲಿನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ಪಕ್ಷದ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ವಿ.ಎಸ್.ಉಗ್ರಪ್ಪ ಸ್ಥಳೀಯರಲ್ಲ ಎಂಬುದು ವಾಸ್ತವ ಸಂಗತಿ. ಆದರೆ, ಇದೇ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಚುನಾಯಿತ ಪ್ರತಿನಿಧಿಗಳನ್ನು ಅವಹೇಳನ ಮಾಡುವುದು ಪ್ರಜಾತಂತ್ರಕ್ಕೆ ಎಸಗುವ ಅಪಚಾರ ಎಂದು ರವಿಕುಮಾರ್ ಪ್ರಕಟಣೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.







