ಅ.29ರಿಂದ ಬಿಬಿಎಂಪಿ ಕೌನ್ಸಿಲ್ ಸಭೆ: ಪಾಲಿಕೆ ಸದಸ್ಯರಿಗೂ ಇಂದಿರಾ ಕ್ಯಾಂಟೀನ್ ಊಟ ನೀಡಲು ತೀರ್ಮಾನ

ಬೆಂಗಳೂರು, ಅ.22: ಬಿಬಿಎಂಪಿ ಕೌನ್ಸಿಲ್ ಸಭೆಗೆ ಹಾಜರಾಗುವ ಎಲ್ಲ ಸದಸ್ಯರಿಗೂ ನೀಡುತ್ತಿದ್ದ ವಿಶೇಷ ಊಟದ ವ್ಯವಸ್ಥೆಯನ್ನು ರದ್ದು ಮಾಡಿ, ಇಂದಿರಾ ಕ್ಯಾಂಟೀನ್ ಊಟ ನೀಡಲು ತೀರ್ಮಾನಿಸಲಾಗಿದೆ.
ನೂತನ ಪಾಲಿಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿನ ಮೊದಲ ಕೌನ್ಸಿಲ್ ಸಭೆ ಅ.29 ರಿಂದ ಆರಂಭವಾಗಲಿದ್ದು, ಅಂದಿನಿಂದಲೇ ಇಂದಿರಾ ಕ್ಯಾಂಟೀನ್ ಊಟ ನೀಡಲು ನಿರ್ಧರಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಬೆಂಗಳೂರಿನ ಜನತೆ ಇಂದಿರಾ ಕ್ಯಾಂಟೀನ್ ಊಟ ಮಾಡುತ್ತಿರುವಾಗ, ನಾವೇಕೆ ಊಟ ಮಾಡಬಾರದು. ಆದುದರಿಂದಾಗಿ, ನನ್ನ ಮೊದಲ ಕೌನ್ಸಿಲ್ ಸಭೆಯಿಂದ ಇಂದಿರಾ ಕ್ಯಾಂಟೀನ್ ಊಟ ಆರಂಭಿಸಲಾಗುವುದು. ಕೌನ್ಸಿಲ್ ಸಭೆ ದಿನದಂದು ಕ್ಯಾಂಟೀನ್‌ನಲ್ಲಿ ಯಾವ ಊಟ ಇರುತ್ತದೆ ಅದೇ ಊಟ ನಮಗೂ ಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಮಾತನಾಡಿ, ಇಂದಿರಾ ಕ್ಯಾಂಟೀನ್ ಊಟ ಮಾಡುವುದರಿಂದ ಜನರಿಗೆ ಒಳ್ಳೆಯ ಸಂದೇಶ ರವಾನಿಸಿದಂತಾಗುತ್ತದೆ. ಹೀಗಾಗಿ, ಮುಂದಿನ ಕೌನ್ಸಿಲ್ ಸಭೆಯಿಂದ ಇಂದಿರಾ ಕ್ಯಾಂಟೀನ್ ಊಟ ತರಿಸಲಾಗುವುದು ಎಂದು ಹೇಳಿದ್ದಾರೆ.
ತೀರ್ಮಾನಕ್ಕೆ ಬದ್ಧ
ಹಿಂದಿನ ವರ್ಷದಂತೆ ಈ ಬಾರಿಯೂ ಪಾಲಿಕೆಯಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮೇಯರ್ ಗಂಗಾಂಬಿಕೆ, ಟಿಪ್ಪು ಜಯಂತಿ ಆಚರಣೆ ಬಗ್ಗೆ ಸರಕಾರದಿಂದ ನಿರ್ದೇಶನ ಬಂದಿಲ್ಲ. ನಿರ್ದೇಶನ ಬಂದರೆ ಸರಕಾರದ ತೀರ್ಮಾನಕ್ಕೆ ಪಾಲಿಕೆ ಬದ್ಧವಾಗಿದೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದರು.
ಜೆಡಿಎಸ್ ಅಭ್ಯರ್ಥಿಯೇ ಉಪಮೇಯರ್
ರಮೀಳಾ ಅವರ ಅಕಾಲಿಕ ಮರಣದಿಂದಾಗಿ ತೆರವಾಗಿರುವ ಉಪಮೇಯರ್ ಸ್ಥಾನ ತುಂಬಲು ಚುನಾವಣೆಯ ದಿನಾಂಕ ಇದುವರೆಗೂ ನಿಗದಿಯಾಗಿಲ್ಲ. ಆದರೆ, ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‌ನಿಂದಲೇ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಬಿಜೆಪಿಯು ಮೇಯರ್ ಚುನಾವಣೆಯಲ್ಲಿ ನಡೆಸಿದ ಅಪರೇಷನ್ ಕಮಲ ವಿಫಲಗೊಂಡರೂ ಅಧಿಕಾರದ ಆಸೆ ಬಿಟ್ಟಿಲ್ಲ. ಅವರು ಏನು ಮಾಡಿದರೂ ಮೈತ್ರಿಕೂಟ ಭದ್ರವಾಗಿರುತ್ತದೆ. ರಾಜ್ಯದ ನಾಯಕರು ಉಪಚುನಾವಣೆಯ ತಯಾರಿಯಲ್ಲಿದ್ದಾರೆ. ಅನಂತರ ಉಪಮೇಯರ್ ಯಾರು ಆಯ್ಕೆಯಾಗುತ್ತಾರೆ ಎಂಬುದು ನಿರ್ಧಾರವಾಗಲಿದೆ ಎಂದು ಆಡಳಿತ ಪಕ್ಷದ ನಾಯಕ ಶಿವರಾಜು ಹೇಳಿದರು.
ಹಿಂದಿನ ಕೌನ್ಸಿಲ್ ಸಭೆಗಳಲ್ಲಿ ವಿಶೇಷ ಊಟದ ಬದಲು ಇಂದಿರಾ ಕ್ಯಾಂಟೀನ್ ಊಟ ನೀಡುವಂತೆ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಸಭೆಯ ಗಮನ ಸೆಳೆದಿದ್ದರು. ಈ ಬಗ್ಗೆ ಯೋಚಿಸಿ ಅ. 29ರಿಂದ ಸಭೆಗೆ ಹಾಜರಾಗುವ ಎಲ್ಲಾ ಸದಸ್ಯರಿಗೆ ಇಂದಿರಾ ಕ್ಯಾಂಟೀನ್ ಊಟ ವ್ಯವಸ್ಥೆ ಮಾಡಲಾಗುವುದು.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್







