ಉಡುಪಿ : ಬೀಡಿ ಕಾರ್ಮಿಕರ ಮುಷ್ಕರಕ್ಕೆ ಸಿಐಟಿಯು ಬೆಂಬಲ
ಉಡುಪಿ, ಅ.22:ಬೀಡಿ ಕಾರ್ಮಿಕರಿಗೆ ಒಂದು ಸಾವಿರ ಬೀಡಿಗೆ 210ರೂ. ಕನಿಷ್ಠ ಕೂಲಿ ನೀಡುವಂತೆ ರಾಜ್ಯ ಸರಕಾರ ಆದೇಶಿಸಿದ್ದರೂ, ಅದನ್ನು ಕಡೆಗಣಿಸಿ ಬೀಡಿ ಕಾರ್ಮಿಕರನ್ನು ವಂಚಿಸುತ್ತಿರುವ ಬೀಡಿ ಮಾಲಕರ ನೀತಿಯನ್ನು ಖಂಡಿಸಿ ಎಐಟಿಯುಸಿ, ಸಿಐಟಿಯು, ಬಿಎಂಎಸ್, ಎಚ್‌ಎಂಎಸ್ ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ಅ.23ರಮಂಗಳವಾರದಿಂದ ನಡೆಯಲಿರುವ ಅನಿರ್ಧಿಷ್ಟಾವಧಿ ಧರಣಿ, ಮುಷ್ಕರಕ್ಕೆ ಸಿಐಟಿಯುವ ಉಡುಪಿ ಜಿಲ್ಲಾ ಸಮಿತಿ ಬೆಂಬಲವನ್ನು ಘೋಷಿಸಿದೆ.
ರಾಜ್ಯ ಸರಕಾರ ರಚಿಸಿದ ಸಮಿತಿ 2018ರ ಎ.1ರಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಸಾವಿರ ಬೀಡಿಗೆ ರೂ. 210 ನೀಡುವಂತೆ ತೀರ್ಮಾನಿಸಿದೆ. ಇದನ್ನು ಸರಕಾರ ಒಪ್ಪಿ,ಆದೇಶ ಹೊರಡಿಸಿದೆ. ಆದರೆ ಬೀಡಿ ಕಂಪೆನಿಗಳ ಮಾಲಕರು ಆದೇಶವನ್ನು ಜಾರಿಗೊಳಿಸದೇ ಬೀಡಿ ಕಾರ್ಮಿಕರನ್ನು ವಂಚಿಸುತ್ತಿದ್ದಾರೆ. ಬೀಡಿ ಕಾರ್ಮಿಕರಿಗೆ ಸಲ್ಲಬೇಕಾದ ನ್ಯಾಯವಾದ ಕೂಲಿ ಕೊಡದೇ ವಂಚಿಸುತ್ತಿರುವ ಮಾಲಕರ ಕಾರ್ಮಿಕ ವಿರೋಧಿ ನೀತಿ ಕೊನೆಗೊಳ್ಳಬೇಕಿದೆ ಎಂದು ಸವಿುತಿ ಹೇಳಿಕೆಯಲ್ಲಿ ತಿಳಿಸಿದೆ.
ಕನಿಷ್ಠ ಕೂಲಿ 210 ರೂ., 2015ರ ಸಾಲಿನ ಬಾಕಿ ತುಟ್ಟಿತ್ಯೆ ಮತ್ತು ವಾರದಲ್ಲಿ 6 ದಿನದ ಕೆಲಸ ನೀಡಿ ಬಡಕಾರ್ಮಿಕರ ಹಿತ ಕಾಪಾಡಬೇಕೆಂದು ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್ ಮಾಲಕರನ್ನು ಒತ್ತಾಯಿಸಿದ್ದಾರೆ. ಬೀಡಿ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅವು ಬೆಂಬಲ ವ್ಯಕ್ತ ಪಡಿಸಿದ್ದಾರೆ.





