ತೆಂಗಿನ ನಾರಿನ ಕ್ಲಸ್ಟರ್ಸ್‌ಗಳ ಆರಂಭಕ್ಕೆ ಆರ್ಥಿಕ ನೆರವು: ಕೇಂದ್ರ ತೆಂಗಿನ ನಾರಿನ ಮಂಡಳಿ ಅಧ್ಯಕ್ಷ ರಾಧಾಕೃಷ್ಣ
ಬೆಂಗಳೂರು, ಅ.22: ರಾಜ್ಯದಲ್ಲಿ ಯಥೇಚ್ಛವಾಗಿ ತೆಂಗು ಬೆಳೆಯುವ ಪ್ರದೇಶದಲ್ಲಿ ತೆಂಗಿನ ನಾರಿನ ಐದು ಕ್ಲಸ್ಟರ್ಸ್‌ಗಳನ್ನು ಪ್ರಾರಂಭಿಸಲು ಕೇಂದ್ರ ತೆಂಗಿನ ನಾರಿನ ಮಂಡಳಿ ಆರ್ಥಿಕ ನೆರವು ನೀಡಲಿದೆ ಎಂದು ಕೇಂದ್ರ ತೆಂಗಿನ ನಾರಿನ ಮಂಡಳಿಯ ಅಧ್ಯಕ್ಷ ಸಿ.ಪಿ.ರಾಧಾಕೃಷ್ಣ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ಅವರ ನೇತೃತ್ವದ ಪ್ರತಿನಿಧಿಗಳ ತಂಡ ರಾಜ್ಯದ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್‌ರನ್ನು ಭೇಟಿ ಮಾಡಿ ತೆಂಗು ಅಭಿವೃದ್ಧಿಯ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದರು.
ತೆಂಗಿನ ನಾರಿನ ಅಭಿವೃದ್ಧಿಗೆ ರಾಜ್ಯದಲ್ಲಿ ವಿಫುಲವಾದ ಅವಕಾಶವಿದ್ದು, ತೆಂಗಿನ ನಾರಿನ ಉದ್ಯಮವನ್ನು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಸರಕಾರ ಹೆಚ್ಚಿನ ಆಸಕ್ತಿ ವಹಿಸುವಂತೆ ಮನವಿ ಮಾಡಿದ ಅವರು, ಕರ್ನಾಟಕದಲ್ಲಿ ಉತ್ತಮಗುಣಮಟ್ಟದ ತೆಂಗಿನ ನಾರು ದೊರೆಯುತ್ತಿದ್ದು, ಇದನ್ನು ಸಮಪರ್ಕವಾಗಿ ಬಳಸಿಕೊಂಡಲ್ಲಿ, ಉತ್ಕೃಷ್ಟ ತೆಂಗಿನ ನಾರಿನ ಉತ್ಪನ್ನವನ್ನು ಉತ್ಪಾದಿಸಲು ಸಾಧ್ಯವಿದೆ ಎಂದರು.
ಕನಾಟಕದಲ್ಲಿ ದೊರೆಯುವ ತೆಂಗಿನ ಉತ್ಪನ್ನಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಉತ್ಪನ್ನಗಳಾದ ತೆಂಗಿನ ನಾರಿನ ಕಾಯಿರ್ ಕಾಂಪೋಸಿಟ್ ಬೋರ್ಡ್‌ಗಳು, ರಬ್ಬರೈಸಡ್ ಕಾಯರ್ ಹಾಸಿಗೆ, ಮ್ಯಾಟಿಂಗ್ ಇನ್ನೂ ಮುಂತಾದವುಗಳನ್ನು ಉತ್ಪಾದಿಸಲು ಅವಕಾಶವಿದೆ ಎಂದ ಅವರು, ಈ ಉದ್ದಿಮೆ ಗ್ರಾಮೀಣ ಭಾಗದ ಕೃಷಿಕರಿಗೆ, ಮಹಿಳೆಯರಿಗೆ, ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸಿಕೊಡುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಅಲ್ಲದೇ, ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ನಿಯಂತ್ರಿಸಲು ಸಾಧ್ಯ ಎಂದರು.
ಕೇಂದ್ರ ತೆಂಗಿನ ನಾರಿನ ಮಂಡಳಿ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ರಾಜ್ಯದಲ್ಲಿ ತೆಂಗಿನ ನಾರಿನ ಉತ್ಪನ್ನಗಳನ್ನು ಪ್ರದರ್ಶಿಸಲು, ಮಾರಾಟ ಮಾಡಲು ತೆಂಗಿನ ನಾರಿನ ಉದ್ದಿಮೆಯ ಬಗ್ಗೆ ಜಾಗೃತಿ ಮೂಡಿಸಲು, ಸಾಧ್ಯವಾಗುವಂತೆ ಬೃಹತ್ ಮಟ್ಟದಲ್ಲಿ ರಾಜ್ಯಮಟ್ಟದ ತೆಂಗಿನ ನಾರಿನ ಒಂದು ದಿನದ ಸಮಾವೇಶವನ್ನು ಆಯೋಜಿಸುವಂತೆ ಅವರು ಸಲಹೆ ನೀಡಿದರು.
ಈ ಸಮಾವೇಶಕ್ಕೆ ವೆಚ್ಚವಾಗುವ ಆರ್ಥಿಕ ನೆರವನ್ನು ಮಂಡಳಿ ನೀಡಲಿದೆ. ಈ ಸಮಾವೇಶದಲ್ಲಿ ಕಾರ್ಯನೀತಿ, ಮಾರುಕಟ್ಟೆ ವ್ಯವಸ್ಥೆ ಹಾಗೂ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವಂತ ವಿಷಯಗಳನ್ನೊಳಗೊಂಡಿರುವಂತೆ ಕಾರ್ಯಕ್ರಮವನ್ನು ಆಯೋಜಿಸುವುದು ಎಂದ ರಾಧಾಕೃಷ್ಣ, ಕೃಷಿ ವಿವಿಯ ತಜ್ಞರ ಸಹಕಾರವನ್ನು ಪಡೆಯವುದು ಹೆಚ್ಚು ಸೂಕ್ತವಾಗಿರುತ್ತದೆ ಎಂದರು.
ರಾಜ್ಯದಲ್ಲಿ ಜಿಯೋ ಟೆಕ್ಸ್‌ಟೈಲ್ ಫ್ಯಾಬ್ರಿಕ್ಸ್, ಸಾವಯವ ತೆಂಗಿನ ನಾರು ಹಾಗೂ ಕಾಯರ್ ಪಿತ್ ಬ್ಲಾಕ್‌ಗೆ ವಿಫುಲವಾದ ಅವಕಾಶವಿದ್ದು, ಇದನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ಮಾಡುವ ಅವಕಾಶಗಳಿವೆ. ರಾಜ್ಯ ಸರಕಾರ ಕಾಯರ್ ಭೂವಸ್ತ್ರವನ್ನು, ರಸ್ತೆ, ನೀರಾವರಿ, ಗ್ರಾಮೀಣ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿರುವುದನ್ನು ಅವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ತೆಂಗಿನ ನಾರಿನ ಮಂಡಳಿಯ ಕಾರ್ಯದರ್ಶಿ ಎಂ.ಕುಮಾರರಾಜ, ಸಿಐಸಿಟಿ ಜಂಟಿ ನಿರ್ದೇಶಕ ವಾಸುದೇವ್, ರಾಜ್ಯ ತೆಂಗಿನ ನಾರಿನ ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಶ್ರೀನಿವಾಸ್, ಸಣ್ಣ ಕೈಗಾರಿಕೆ ಸಚಿವರ ಆಪ್ತ ಕಾರ್ಯದರ್ಶಿ ಡಾ.ಕೆ.ಮುರಳೀಧರ್ ಉಪಸ್ಥಿತರಿದ್ದರು.







