ಅ.25ಕ್ಕೆ ರಾಷ್ಟ್ರೀಯ ಪಾರಂಪರಿಕ ವೈದ್ಯ ಸಮ್ಮೇಳನ
ಬೆಂಗಳೂರು, ಅ. 22: ರಾಷ್ಟ್ರೀಯ ಪಾರಂಪರಿಕ ವೈದ್ಯ ಸಮ್ಮೇಳನ ಹಾಗೂ ಮೂಲಿಕಾ ಉತ್ಸವವನ್ನು ಅ.25ರಿಂದ ಮೂರು ದಿನದವರೆಗೂ ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವುದಾಗಿ ಪಾರಂಪರಿಕ ವೈದ್ಯ ಪರಿಷತ್‌ನ ಸಂಸ್ಥಾಪಕ ಡಾ.ಸತ್ಯನಾರಾಯಣ ಭಟ್ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅರಣ್ಯ ಸಚಿವ ಆರ್.ಶಂಕರ್, ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ದೇಶದ ವಿವಿಧ ಭಾಗಗಳಿಂದ 2 ಸಾವಿರಕ್ಕೂ ಹೆಚ್ಚು ಪಾರಂಪರಿಕ ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 3 ದಿನಗಳ ಕಾಲ ನಡೆಯುವ ಈ ಸಮ್ಮೇಳನ ಮಧು-ಮೇಹದ ಬಗ್ಗೆ ಚರ್ಚೆ-ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಹಿರಿಯ ಪಾರಂಪರಿಕ ವೈದ್ಯರು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೂಲಿಕಾ-2018 ಎನ್ನುವ ವಿಶೇಷವಾದ ಗಿಡಮೂಲಿಕೆ ಮತ್ತು ಗಿಡಮೂಲಿಕೆ ಔಷಧಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಹಲವು ಅಪರೂಪದ ಔಷಧಿ ಸಸ್ಯಗಳು ಮತ್ತು ಗಿಡಮೂಲಿಕೆಗಳು ಪ್ರದರ್ಶನದಲ್ಲಿ ಸಿಗಲಿದೆ. ವೈದ್ಯ ಪರಿಷತ್‌ನ ಇತಿಹಾಸದಲ್ಲೇ ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ. ಹಾಗೂ ದೀರ್ಘಕಾಲದ ರೋಗಗಳ ನಿವಾರಣೆಗೊಂದು ಸುವರ್ಣಾವಕಾಶ ಸಿಗಲಿದ್ದು, ಸಾರ್ವಜನಿಕರು ಸಮ್ಮೇಳನದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದರು.
ಮಧುಮೇಹ ಎಂಬ ಭ್ರಾಂತಿಯಲ್ಲಿ ಕೋಟ್ಯಂತರ ಜನರು ದುರ್ಬಲರಾಗಿದ್ದು, ಅವರಿಗೆ ಆತ್ಮಸ್ಥೈರ್ಯವನ್ನು ತುಂಬಿ ಮಧುಮೇಹ ಭ್ರಾಂತಿಯಿಂದ ಹೊರಬಂದು ಸುಖೀ ಜೀವನ ನಡೆಸಲು ಈ ಸಮ್ಮೇಳನ ದಿಕ್ಸೂಚಿಯಾಗಲಿದೆ ಎಂದು ಅಭಿಪ್ರಾಯಪಟ್ಟರು







