ಎನ್‌ಕೌಂಟರ್ ಸ್ಥಳದಲ್ಲಿ 7 ನಾಗರಿಕರ ಸಾವು: ಕಾಶ್ಮೀರ ಬಂದ್; ಜನಜೀವನ ಅಸ್ತವ್ಯಸ್ತ

ಶ್ರೀನಗರ, ಅ. 22: ಕುಲ್ಗಾಂವ್ ಜಿಲ್ಲೆಯ ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಗರಿಕರ ಸಾವಿಗೆ ಸಂಬಂಧಿಸಿ ಪ್ರ್ರತ್ಯೇಕತವಾದಿಗಳು ಸೋಮವಾರ ಕರೆ ನೀಡಿದ್ದ ನೀಡಿದ್ದ ಬಂದ್‌ನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಾಯಿಂಟ್ ರೆಸಿಸ್ಟೆಂಟ್ ಲೀಡರ್‌ಶಿಪ್ ಒಕ್ಕೂಟದ ಅಡಿಯಲ್ಲಿ ಪ್ರತ್ಯೇಕತಾವಾದಿಗಳಾದ ಸೈಯದ್ ಅಲಿ ಶಾ ಗಿಲಾನಿ, ಮಿರ್ವೈಜ್ ಉಮರ್ ಫಾರೂಕ್ ಹಾಗೂ ಮುಹಮ್ಮದ್ ಯಾಸಿನ್ ಮಲ್ಲಿಕ್ ಬಂದ್‌ಗೆ ಕರೆ ನೀಡಿದ್ದರು.
ಬಂದ್‌ನಿಂದಾಗಿ ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಂಗಡಿ, ಖಾಸಗಿ ಕಚೇರಿ, ಪೆಟ್ರೋಲ್ ಪಂಪ್ ಹಾಗೂ ಇತರ ವ್ಯವಹಾರ ಸ್ಥಾಪನೆಗಳು ಮುಚ್ಚಿದ್ದವು. ಸಾರ್ವಜನಿಕ ಸಾಗಾಟ ರದ್ದುಗೊಂಡಿತ್ತು. ನಗರದ ಕೆಲವು ಭಾಗಗಳಲ್ಲಿ ಖಾಸಗಿ ಕಾರುಗಳು ಸಂಚಾರ ನಡೆಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ಶಾಲಾ, ಕಾಲೇಜುಗಳು ಮುಚ್ಚಿದ್ದವು. ರೈಲು ಸೇವೆ ರದ್ದುಗೊಳಿಸಲಾಗಿತ್ತು.
ಬಂದ್‌ನಿಂದಾಗಿ ಸರಕಾರಿ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ಹಾಜರಾತಿ ಕಡಿಮೆ ಇತ್ತು. ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರಲಿಲ್ಲ. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಸ್ಥಳಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.
ಕುಲ್ಗಾಂವ್ ಜಿಲ್ಲೆಯಲ್ಲಿ ಭದ್ರತಾ ಪಡೆ ರವಿವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾಗಿದ್ದರು. ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಸ್ಫೋಟ ಸಂಭವಿಸಿ 7 ಮಂದಿ ನಾಗರಿಕರು ಮೃತಪಟ್ಟಿದ್ದರು.
ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಬಂದ್‌ಗೆ ಕಾಶ್ಮೀರ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ (ಕೆಸಿಸಿಐ) ಹಾಗೂ ಕಾಶ್ಮೀರ ಪಂಡಿತ್ ಸಂಘಟನೆ ತನ್ನ ಬೆಂಬಲ ನೀಡಿತ್ತು. ರವಿವಾರ ನಡೆದ ತುರ್ತು ಸಭೆಯಲ್ಲಿ ಕೆಸಿಸಿಐಯ ಕಾರ್ಯಕಾರಿ ಸಮಿತಿ, ಕಾಶ್ಮೀರದ ನಿಶ್ಯಸ್ತ್ರ ನಾಗರಿಕರ ವಿರುದ್ಧ ಸೇನೆಯ ಬಳಕೆ ಹೆಚ್ಚುತ್ತಿರುವ ಬಗ್ಗೆ ಆಘಾತ ಹಾಗೂ ಆತಂಕ ವ್ಯಕ್ತಪಡಿಸಿತ್ತು.
ಹತ್ಯೆ ಖಂಡಿಸಿರುವ ಕೆಸಿಸಿಐ, ನಿರಂತರವಾಗಿ ಹೆಚ್ಚು ಹತ್ಯೆಗೆ ಕಾರಣವಾಗುತ್ತಿರುವ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ನಾಗರಿಕ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವುದನ್ನು ತಡೆ ಹಿಡಿಯುವಂತೆ ಸರಕಾರವನ್ನು ಆಗ್ರಹಿಸಿದೆ.
ಅಂತ್ಯವಿಲ್ಲದೆ ಅಮಾಯಕ ಕಾಶ್ಮೀರಿಗಳು ಜೀವ ಕಳೆದುಕೊಳ್ಳುತ್ತಿರುವುದು ನಮಗೆಲ್ಲರಿಗೂ ನೋವಿನ ವಿಚಾರ ಎಂದು ಕೆಸಿಸಿಐ ಹೇಳಿದೆ.
ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಬಂದ್‌ಗೆ ಕಾಶ್ಮೀರ ಪಂಡಿತ್ ಸಂಘರ್ಷ ಸಮಿತಿ (ಕೆಪಿಎಸ್‌ಎಸ್) ಕೂಡ ಬೆಂಬಲ ವ್ಯಕ್ತಪಡಿಸಿತ್ತು. ‘‘ನಾಗರಿಕರ ಜೀವಗಳನ್ನು ರಕ್ಷಿಸಲು ಎನ್‌ಕೌಂಟರ್ ನಡೆದ ಪ್ರದೇಶವನ್ನು ಸ್ವಚ್ಛಗೊಳಿಸುವುದು ಭದ್ರತಾ ಪಡೆಗೆ ಕಡ್ಡಾಯ’’ ಎಂದು ಅದು ಹೇಳಿದೆ.
ಅಖಿಲ ಕಾಶ್ಮೀರ ಅಟೋ ರಿಕ್ಷಾ ಚಾಲಕರ ಅಸೋಸಿಯೇಶನ್ ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿತ್ತು
ಜಮ್ಮು ಹಾಗೂ ಕಾಶ್ಮೀರ ಶಾಲಾ ಶಿಕ್ಷಣ ಮಂಡಳಿ (ಜೆಕೆಬಿಒಎಸ್‌ಇ) ಹಾಗೂ ವಿಜ್ಞಾನ ಹಾಗೂ ತಂತ್ರಜ್ಞಾನದ ಇಸ್ಲಾಮಿಕ್ ವಿಶ್ವವಿದ್ಯಾನಿಲಯ (ಐಯುಎಸ್‌ಟಿ) ಸೋಮವಾರ ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಿದೆ.







