ಜಗತ್ತಿನ ಅತಿ ಉದ್ದದ ‘ಸಾಗರ ಸೇತುವೆ’ ಪೂರ್ಣ
55 ಕಿ.ಮೀ. ಉದ್ದದ 1.47 ಲಕ್ಷ ಕೋಟಿ ರೂ. ಮೊತ್ತದ ಯೋಜನೆ

ಹಾಂಕಾಂಗ್, ಅ. 22: ಹಾಂಕಾಂಗ್ ಮತ್ತು ಮಕಾವು ದೇಶಗಳನ್ನು ಮಾತೃನೆಲ ಚೀನಾಕ್ಕೆ ಸಂಪರ್ಕಿಸುವ 20 ಬಿಲಿಯ ಡಾಲರ್ (ಸುಮಾರು 1.47 ಲಕ್ಷ ಕೋಟಿ ರೂಪಾಯಿ) ವೆಚ್ಚದ ಬೃಹತ್ ಸಾಗರ ಸೇತುವೆಯು ಬುಧವಾರ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.
ಇದು ಸಮುದ್ರದಲ್ಲಿ ಹಾದು ಹೋಗುವ ಜಗತ್ತಿನ ಅತ್ಯಂತ ಉದ್ದದ ಸೇತುವೆಯಾಗಿದೆ.
55 ಕಿ.ಮೀ. ಉದ್ದದ ಸೇತುವೆಯು ಚೀನಾದ ಝುಹೈ ನಗರದಲ್ಲಿ ಕೊನೆಗೊಳ್ಳುತ್ತದೆ.
ಸೇತುವೆಯ ನಿರ್ಮಾಣಕ್ಕೆ 9 ವರ್ಷ ತಗಲಿದೆ. ಅದು 2016ರಲ್ಲೇ ಸಂಚಾರಕ್ಕೆ ಮುಕ್ತವಾಗಬೇಕಾಗಿತ್ತು. ಆದರೆ, ಕಾಮಗಾರಿಯಲ್ಲಿ ಪದೇ ಪದೇ ಸಂಭವಿಸಿದ ವಿಳಂಬದಿಂದಾಗಿ ಸೇತುವೆ ಈಗಷ್ಟೇ ಪೂರ್ಣಗೊಂಡಿದೆ.
ದಕ್ಷಿಣ ಚೀನಾದ 56,500 ಚದರ ಕಿ.ಮೀ. ವಿಸ್ತೀರ್ಣವನ್ನು ಕ್ರಮಿಸುವ ಚೀನಾದ ‘ಗ್ರೇಟರ್ ಬೇ ಏರಿಯ’ ಯೋಜನೆಯ ಮಹತ್ವದ ಭಾಗ ಈ ಸೇತುವೆಯಾಗಿದೆ. ಈ ಯೋಜನೆಯ ವ್ಯಾಪ್ತಿಯಲ್ಲಿ ಹಾಂಕಾಂಗ್ ಮತ್ತು ಮಕಾವು ಸೇರಿದಂತೆ 11 ನಗರಗಳು ಬರುತ್ತವೆ. ಈ ಪ್ರದೇಶದಲ್ಲಿ 6.8 ಕೋಟಿ ಜನರು ವಾಸಿಸುತ್ತಿದ್ದಾರೆ.
ಸೇತುವೆಯು ನಗರಗಳ ನಡುವಿನ ಪ್ರಯಾಣ ಅವಧಿಯನ್ನು 3 ಗಂಟೆಯಿಂದ 30 ನಿಮಿಷಗಳಿಗೆ ತಗ್ಗಿಸುತ್ತದೆ ಎಂದು ಹೇಳಲಾಗಿದೆ.
ಆದಾಗ್ಯೂ, ಹಾಂಕಾಂಗ್‌ನ ಖಾಸಗಿ ಕಾರುಗಳ ಮಾಲೀಕರು ಸೇತುವೆಯನ್ನು ದಾಟಲು ವಿಶೇಷ ಪರವಾನಿಗೆಯನ್ನು ಪಡೆಯಬೇಕಾಗಿದೆ.
ಹಾಂಕಾಂಗ್‌ನಲ್ಲಿ ತೀವ್ರ ವಿರೋಧ
ಹಾಂಕಾಂಗ್‌ನಲ್ಲಿ ಈ ಸೇತುವೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಂಕಾಂಗ್‌ನಲ್ಲಿ ಯಾರೂ ಈ ಸೇತುವೆಯನ್ನು ಬಯಸಿಯೂ ಇಲ್ಲ, ಮಕಾವು ಅಥವಾ ಝುಹೈ ಜೊತೆಗೆ ಅವರಿಗೆ ಹೆಚ್ಚಿನ ಸಂಪರ್ಕವೂ ಬೇಕಾಗಿಲ್ಲ. ಚೀನಾದ ಪ್ರವಾಸಿಗರು ನಗರವನ್ನು ಆವರಿಸುತ್ತಾರೆ ಎಂಬ ಭೀತಿಯನ್ನು ಹಾಂಕಾಂಗ್‌ನ ಜನರು ಹೊಂದಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.







