ಬಿಜೆಪಿ ನಾಯಕರ ವಿರುದ್ಧದ ಪ್ರಕರಣ ಬುಡಮೇಲುಗೊಳಿಸಲು ಅಸ್ಥಾನರನ್ನು ಸಿಬಿಐಗೆ ನೇಮಿಸಿದ್ದ ಮೋದಿ: ಯೆಚೂರಿ ಆರೋಪ

ಹೊಸದಿಲ್ಲಿ, ಅ.23: ಸಿಬಿಐ ವಿಶೇಷ ತನಿಖಾ ತಂಡದ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ವಿರುದ್ಧ ಸಿಬಿಐ ಲಂಚ ಸ್ವೀಕಾರ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ, ಪ್ರಧಾನಿಯೇ ಆಯ್ಕೆ ಮಾಡಿರುವ ಸಿಬಿಐ ಅಧಿಕಾರಿ ಅಪರಾಧ ಎಸಗುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅವರಿಗೆ ಬಿಜೆಪಿ ಆಶ್ರಯದಾತನಾಗಿತ್ತು ಮತ್ತು ಮೋದಿ ಅವರನ್ನು ಆರಿಸಿದ್ದರು. ಬಿಜೆಪಿ ಮುಖಂಡರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಬುಡಮೇಲುಗೊಳಿಸುವ ಏಕೈಕ ಉದ್ದೇಶದಿಂದ, ಸಿಬಿಐ ನಿರ್ದೇಶಕರ ತೀವ್ರ ವಿರೋಧದ ಮಧ್ಯೆಯೂ ಅಸ್ಥಾನರನ್ನು ಪ್ರತಿಷ್ಠಿತ ತನಿಖಾ ಸಂಸ್ಥೆಗೆ ನೇಮಕ ಮಾಡಲಾಗಿದೆ. ಈ ಅಧಿಕಾರಿ ಈಗ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಮತ್ತು ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವಾಗ ಅವರ ರಾಜಕೀಯ ಆಶ್ರಯದಾತ ಬಿಜೆಪಿಯನ್ನೂ ವಿಚಾರಣೆ ನಡೆಸಬಾರದೇಕೆ. ಈ ಪ್ರಕರಣದಲ್ಲಿ ಬಿಜೆಪಿಯ ಪಾತ್ರವೇನು ಎಂದು ಯೆಚೂರಿ ಪ್ರಶ್ನಿಸಿದ್ದಾರೆ.
ಕೊಡು-ಕೊಳ್ಳುವ ಷರತ್ತಿಗೆ ಒಪ್ಪುವ ಹಲವು ಅಪ್ರಾಮಾಣಿಕ ಅಧಿಕಾರಿಗಳನ್ನು ಮೋದಿ ಸರಕಾರ ದೇಶದ ಉನ್ನತ ಸಂಸ್ಥೆಯೊಳಗೆ ಸೇರಿಸಿಕೊಂಡಿದೆ. ಇದು ಕಳಪೆ ಆಡಳಿತದ ನಿದರ್ಶನ ಮಾತ್ರವಲ್ಲ, ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ರಾಜಕೀಯ ಸೇಡು ತೀರಿಸಿಕೊಳ್ಳುವ ಮತ್ತು ಸ್ವಹಿತ ರಕ್ಷಣೆಯ ದುರುದ್ದೇಶದ ಕ್ರಮವಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧದ ಗಂಭೀರ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಸಿಬಿಐ ಅವರಿಗೆ ಈ ಪ್ರಕರಣದಲ್ಲಿ ‘ಕ್ಲೀನ್‌ಚಿಟ್’ ನೀಡಿರುವುದು ಹೇಗೆ ಮತ್ತು ಯಾಕೆಂದು ಈಗ ಸ್ಪಷ್ಟವಾಗಿದೆ ಎಂದು ಯೆಚೂರಿ ಹೇಳಿದ್ದಾರೆ.
ದೇಶದ ಸಂಸ್ಥೆಗಳಿಗೆ ಹಾನಿ ಎಸಗಿ ಅವನ್ನು ನಾಶಗೊಳಿಸುವ ಕಾರ್ಯದಲ್ಲಿ ಬಿಜೆಪಿಯ ಉನ್ನತ ಮುಖಂಡರಿಗೆ ದೇಶದ ಇತಿಹಾಸದಲ್ಲೇ ಯಾರೂ ಸಾಟಿಯಾಗಲಾರರು. ಬಿಜೆಪಿ ಹಾಗೂ ಅದರ ಮಾತೃಸಂಸ್ಥೆ ಆರೆಸ್ಸೆಸ್‌ನ ದುರ್ಮಾರ್ಗದ ಯೋಜನೆಗಳನ್ನು ವಿಫಲಗೊಳಿಸಬೇಕಾಗಿದೆ ಎಂದು ಯೆಚೂರಿ ತಿಳಿಸಿದ್ದಾರೆ.







