ಮೂವರು ಯೋಧರ ಹತ್ಯೆಯನ್ನು ಪ್ರತಿಭಟಿಸಲು ಪಾಕ್ ರಾಜತಾಂತ್ರಿಕನನ್ನು ಕರೆಸಿದ ಭಾರತ

ಹೊಸದಿಲ್ಲಿ,ಅ.23: ಪಾಕಿಸ್ತಾನಿ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಯೋರ್ವರನ್ನು ಕರೆಸಿಕೊಂಡ ಭಾರತವು ಇತ್ತೀಚಿಗೆ ಜಮ್ಮು-ಕಾಶ್ಮೀರದ ಸುಂದರಬನಿ ವಿಭಾಗದಲ್ಲಿ ಪಾಕ್ ಭಯೋತ್ಪಾದಕರಿಂದ ನುಸುಳುವಿಕೆ ಪ್ರಯತ್ನದ ಸಂದರ್ಭದಲ್ಲಿ ತನ್ನ ಮೂವರು ಯೋಧರ ಹತ್ಯೆಗಳಿಗೆ ಸಂಬಂಧಿಸಿದಂತೆ ಬಲವಾದ ಪ್ರತಿಭಟನೆಯನ್ನು ದಾಖಲಿಸಿತು.
ಪಾಕಿಸ್ಥಾನದ ಇಂತಹ ಪ್ರಚೋದಕ ಕೃತ್ಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅತ್ಯಂತ ಕಟುವಾದ ಶಬ್ದಗಳಲ್ಲಿ ಖಂಡಿಸಿದೆ. ಪಾಕಿಸ್ತಾನವು ಭಯೋತ್ಪಾದನೆಗೆ ನೆರವು ನೀಡುವಲ್ಲಿ ಮತ್ತು ಕುಮ್ಮಕ್ಕು ನೀಡುವಲ್ಲಿ ಶಾಮೀಲಾಗಿರುವುದನ್ನು ಅದರ ಈ ಕೃತ್ಯವು ಬಹಿರಂಗಗೊಳಿಸಿದೆ ಮತ್ತು ರಚನಾತ್ಮಕ ಮಾತುಕತೆಗಳನ್ನು ಉತ್ತೇಜಿಸುವ ಹಾಗೂ ಶಾಂತಿ ಸ್ಥಾಪನೆ ಬಯಕೆಯ ಅದರ ಹೇಳಿಕೆಗಳ ಪೊಳ್ಳುತನವನ್ನು ಬಯಲಿಗೆಳೆದಿದೆ ಎಂದು ಸಚಿವಾಲಯವು ಮಂಗಳವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ತನ್ನ ಕಚೇರಿಗೆ ಕರೆಸಲಾಗಿದ್ದ ಹಿರಿಯ ಅಧಿಕಾರಿಯ ಹೆಸರನ್ನು ಸಚಿವಾಲಯವು ಪ್ರಸ್ತಾಪಿಸಿಲ್ಲವಾದರೂ ಪಾಕ್ ರಾಯಭಾರಿ ಕಚೇರಿಯ ಸಚಿವ(ರಾಜಕೀಯ) ಅಬ್ದುಲ್ ಹಮೀದ್ ಅವರಾಗಿರುವ ಸಾಧ್ಯತೆಗಳಿವೆ.
ಅ.21ರಂದು ನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸುವಾಗ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಶಸ್ತ್ರಸಜ್ಜಿತ ಪಾಕ್ ನುಸುಳುಕೋರರನ್ನು ಭಾರತೀಯ ಭದ್ರತಾ ಪಡೆಗಳು ಕೊಂದಿವೆ ಮತ್ತು ಪಾಕ್ ಸರಕಾರವು ತನ್ನ ಪ್ರಜೆಗಳ ಶವಗಳನ್ನು ಪಡೆದುಕೊಳ್ಳಬೇಕು ಎಂದೂ ತಿಳಿಸಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.
ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಪಡೆಗಳಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯ ನಿರಂತರ ಘಟನೆಗಳ ಬಗ್ಗೆಯೂ ಭಾರತವು ತನ್ನ ತೀವ್ರ ಕಳವಳವನ್ನು ತಿಳಿಸಿದೆ. ಭಾರತದ ವಿರುದ್ಧ ಯಾವುದೇ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸಲು ತನ್ನ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶವನ್ನು ಬಳಸಲು ಅವಕಾಶ ನೀಡದಿರುವ ತನ್ನ ದ್ವಿಪಕ್ಷೀಯ ಬದ್ಧತೆಯನ್ನು ಪಾಲಿಸುವಂತೆಯೂ ಪಾಕಿಸ್ತಾನಕ್ಕೆ ಸೂಚಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.
ಮಂಗಳವಾರ ಬೆಳಿಗ್ಗೆ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ(ಡಿಜಿಎಂಒ)ರೊಂದಿಗೆ ದೂರವಾಣಿಯಲಿ ಮಾತನಾಡಿದ ಭಾರತೀಯ ಸೇನೆಯ ಡಿಜಿಎಂಒ ದಾಳಿಯ ಕುರಿತು ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.







