ಜಿಲ್ಲಾಧಿಕಾರಿ ಮಾತಿಗೆ ತಪ್ಪಿದಲ್ಲಿ ನ.22ರಂದು ಉಡುಪಿ ಜಿಲ್ಲೆ ಬಂದ್: ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘ ಎಚ್ಚರಿಕೆ
ತಿಂಗಳೊಳಗೆ ಮರಳು ಸಮಸ್ಯೆ ಬಗೆಹರಿಸುವ ಭರವಸೆ

ಉಡುಪಿ, ಅ.23: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದವರಿಗೆ ನೀಡಿರುವ ಭರವಸೆಯಂತೆ 30 ದಿನಗಳೊಳಗೆ ಜಿಲ್ಲೆಯಲ್ಲಿ ಮರಳು ಸಮಸ್ಯೆ ಬಗೆಹರಿಸಿ ಮರಳುಗಾರಿಕೆಗೆ ಅವಕಾಶ ನೀಡದಿದ್ದರೆ ನ.22ರಂದು ಉಡುಪಿ ಜಿಲ್ಲೆ ಬಂದ್‌ಗೆ ಕರೆ ನೀಡುವ ಮೂಲಕ ಉಗ್ರ ಸ್ವರೂಪದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪ್ರವೀಣ್ ಸುವರ್ಣ, ಸಂಘದ ನೇತೃತ್ವ ದಲ್ಲಿ ಅ.22ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾತ್ರಿ ವೇಳೆ ಮೂರನೆ ಸುತ್ತಿನ ಮಾತುಕತೆಗೆ ಸಂಘದ ಪದಾಧಿಕಾರಿಗಳನ್ನು ಕರೆದಿದ್ದು, 21 ದಿನಗಳೊಳಗೆ ಗ್ರಾಪಂ ಮಟ್ಟದಲ್ಲಿ ಮರಳುಗಾರಿಕೆಯನ್ನು ಪ್ರಾರಂಭಿಸುವ ಪೂರ್ಣ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿರುವ ಹಿನ್ನೆಲೆಯಲ್ಲಿ ಈ ಮುಷ್ಕರವನ್ನು ಹಿಂದೆಗೆದುಕೊಳ್ಳಲಾಯಿತು ಎಂದರು.
ಸಿಆರ್‌ಝೆಡ್ ಹಾಗೂ ನಾನ್‌ಸಿಆರ್‌ಝೆಡ್ ವ್ಯಾಪ್ತಿಯ ಎಲ್ಲ ದಿಬ್ಬಗಳಲ್ಲಿ ಮರಳುಗಾರಿಕೆ ಆರಂಭಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದು, ಒಂದು ವೇಳೆ ಗಡುವಿನ ಒಳಗೆ ಈ ಸಮಸ್ಯೆ ಬಗೆಹರಿಯದಿದ್ದರೆ ಮುಂದೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕೂಡ ಜಿಲ್ಲಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸಂಘ ನೀಡಿದೆ. ಆದುದರಿಂದ ಅ.25ರಂದು ಮರಳು ಸಮಸ್ಯೆ ವಿರೋಧಿಸಿ ನಡೆಯುವ ಪ್ರತಿಭಟನೆಗೆ ನಮ್ಮ ಸಂಘ ಯಾವುದೇ ಬೆಂಬಲ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
179 ಪರವಾನಿಗೆದಾರರಿಗೆ ಅವಕಾಶ: ಕೇವಲ 9 ದಿಬ್ಬಗಳಲ್ಲಿ ಮರಳು ಗಾರಿಕೆಗೆ ಅವಕಾಶ ನೀಡಿದರೆ ಅದರಿಂದ ಕೇವಲ 60 ಮಂದಿಗೆ ಮಾತ್ರ ಪರವಾನಿಗೆ ದೊರೆಯುತ್ತದೆ. ಇದರಿಂದ ಮರಳು ದರ ದುಪ್ಪಟ್ಟು ಆಗಿ, ಮರಳಿನ ಕೊರತೆ ಎದುರಾಗುವ ಸಾಧ್ಯತೆಗಳು ಇರುತ್ತವೆ. ಆದುದರಿಂದ ಸಿಆರ್‌ಝೆಡ್ ಹಾಗೂ ನಾನ್‌ಸಿಆರ್‌ಝೆಡ್‌ನಲ್ಲಿ ಎಲ್ಲ 179 ಪರವಾನಿಗೆದಾರರಿಗೆ ಮರಳು ತೆಗೆಯಲು ಅವಕಾಶ ನೀಡಬೇಕು. ಇದರಿಂದ ಪೈಪೋಟಿ ಕಡಿಮೆಯಾಗಿ ಮರಳಿನ ದರ ಕಡಿಮೆಯಾಗುತ್ತದೆ ಎಂದು ಕಾಪು ಟೆಂಪೊ ಮಾಲಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ತಿಳಿಸಿದರು.
ಕುಂದಾಪುರ ತಾಲೂಕಿನ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಕಾಂಡ್ಲಾ ಗಿಡಗಳು ಹಾಗೂ ಮೀನುಗಳು ಮೊಟ್ಟೆ ಇಡುವ ಪ್ರದೇಶಗಳಲ್ಲಿ ಮರಳುಗಾರಿಕೆಗೆ ಹೇರಿರುವ ನಿಷೇಧವನ್ನು ತೆರವುಗೊಳಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಹೆಚ್ಚು ಪರವಾನಿಗೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಜಿಲ್ಲಾಧಿಕಾರಿ ನೀಡಿದ 21 ದಿನಗಳ ಭರವಸೆಯ ಗಡುವು ನ.12ಕ್ಕೆ ಮುಗಿಯಲಿದೆ. ಆದರೆ ನಾವು ಅವರಿಗೆ ಒಟ್ಟು 30 ದಿನಗಳ ಗಡುವು ನೀಡಿದ್ದೇವೆ. ಅದರ ಅವಧಿ ನ.21ಕ್ಕೆ ಮುಗಿಯುತ್ತದೆ. ಆ ದಿನಾಂಕದೊಳಗೆ ಮರಳುಗಾರಿಕೆಗೆ ಅವಕಾಶ ನೀಡದಿದ್ದರೆ ಉಡುಪಿ ಜಿಲ್ಲೆ ಬಂದ್‌ಗೆ ಕರೆ ನೀಡಲಾಗುವುದು. ಅಂದು ಯಾವುದೇ ತಡೆಗೆ ಬಗ್ಗದೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಲಾರಿ ಮಾಲಕರ ಸಂಘಧ ಅಧ್ಯಕ್ಷ ಉದಯ ಕುಮಾರ್, ಕುಂದಾಪುರ ಅಧ್ಯಕ್ಷ ಗುಣಕರ ಶೆಟ್ಟಿ, ಪೆರ್ಡೂರು ಅಧ್ಯಕ್ಷ ರಾಜೇಶ್ ಕುಮಾರ್ ಉಪಸ್ಥಿತರಿದ್ದರು.
ಗ್ರಾಪಂ ವಿರುದ್ಧವೂ ಕ್ರಮ ಜರಗಿಸಿ
ಲಾರಿ ಮಾಲಕರ ಸಂಘ ಯಾವುದೇ ಕಾರಣಕ್ಕೂ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡುವುದಿಲ್ಲ. ಅಕ್ರಮ ಮರಳು ಸಾಗಾಟ ಮಾಡುವ ಲಾರಿಗಳನ್ನು ಮಾತ್ರ ಗುರಿ ಮಾಡದೆ, ಅದಕ್ಕೆ ಮೂಲ ಕಾರಣವಾದ ಆಯಾ ಗ್ರಾಪಂಗಳನ್ನು ಕೂಡ ಗುರಿಯಾಗಿರಿಸಿ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಅಕ್ರಮ ಮರಳು ಗಾರಿಕೆಯನ್ನು ತಡೆಯಬಹುದು ಎಂದು ಚಂದ್ರ ಪೂಜಾರಿ ತಿಳಿಸಿದರು.
ದಂಡ, ಜಿಪಿಎಸ್ ಕೈಬಿಡಲು ಆಗ್ರಹ
ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುವ ವಾಹನಗಳನ್ನು ವಶಪಡಿಸಿ, ದುಪ್ಪಟ್ಟು ದಂಡ ವಿಧಿಸುವ ಕ್ರಮವನ್ನು ಕೈಬಿಡಬೇಕು. ಅದರ ಬದಲು ಅಂತಹ ವಾಹನಗಳಿಗೆ ಸ್ಥಳದಲ್ಲಿಯೇ ದಂಡ ವಿಧಿಸಿ ವಾಹನವನ್ನು ಬಿಡುಗಡೆಗೊಳಿಸಬೇಕು. ನಾವು ಯಾರು ಕೂಡ ಉಡುಪಿ ಜಿಲ್ಲೆ ಬಿಟ್ಟು ಹೊರ ಜಿಲ್ಲೆಗಳಿಗೆ ಮರಳು ಸಾಗಾಟ ಮಾಡುವುದಿಲ್ಲ. ಆದುದರಿಂದ ನಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಕ್ರಮ ಕೈಬಿಡಬೇಕು. ಹೊರ ಜಿಲ್ಲೆಗಳಿಗೆ ಮರಳು ಸಾಗಿಸುವ ವಾಹನಗಳನ್ನು ಗುರುತಿಸಿ, ಅವುಗಳಿಗೆ ಎರಡು ಪಟ್ಟು ದಂಡ ವಿಧಿಸುವ ಕ್ರಮವನ್ನು ಬೇಕಾದರೆ ಜಿಲ್ಲಾಡಳಿತ ಜಾರಿಗೆ ತರಲಿಎಂದು ಚಂದ್ರ ಪೂಜಾರಿ ಹೇಳಿದರು.







