ಮರಳು ಸಮಸ್ಯೆ: ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಧರಣಿ

ಕುಂದಾಪುರ, ಅ.23: ಮರಳು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘವು ಕುಂದಾಪುರದ ಶಾಸ್ತ್ರಿ ವೃತ್ತದ ಬಳಿ ಮಂಗಳವಾರ ಧರಣಿ ನಡೆಸಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಎಚ್. ನರಸಿಂಹ, ಮರಳು ಸಮಸ್ಯೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಮರಳು ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕಾದ ಜಿಲ್ಲಾಡಳಿತ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಮರಳು ಸಮಸ್ಯೆಯಿಂದಾಗಿ ನಿರ್ಮಾಣ ಕ್ಷೇತ್ರವು ಸಂಪೂರ್ಣ ನೆಲಕಚ್ಚಿದೆ. ದುಡಿಮೆಯನ್ನೇ ನಂಬಿ ಸಾಲ ಮಾಡಿ ಕುಟುಂಬ ನಿರ್ವಹಿಸುತ್ತಿರುವ ಕಟ್ಟಡ ಕಾರ್ಮಿಕರ ಕುಟುಂಬಗಳು ಕೆಲಸವಿಲ್ಲದೆ ಸಂಕಷ್ಟದಲ್ಲಿವೆ. ಕಾರ್ಮಿಕರ ಹಿತದೃಷ್ಠಿ ಯಿಂದ ಮರಳು ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಲು ಸರಕಾರ ಮುಂದಾಗಬೇಕು. ಇಲ್ಲವಾದಲ್ಲಿ ನ.16ರಂದು ಜಿಲ್ಲೆಯ ಎಲ್ಲಾ ಕಟ್ಟಡ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಮಾತನಾಡಿ, ಜಿಲ್ಲೆಯ ಜನರನ್ನು ಕಾಡುತ್ತಿರುವ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಸರಕಾರ ಮಧ್ಯಪ್ರವೇಶಿಸಬೇಕು ಮತ್ತು ಸರಕಾರವೇ ಮರಳುಗಾರಿಕೆ ನಡೆಸಿ ಕಡಿಮೆ ದರದಲ್ಲಿ ಜಿಲ್ಲೆಯ ಜನರಿಗೆ ವಿತರಣೆ ಮಾಡಬೇಕು. ಕಳೆದ ಎರಡು ವರ್ಷಗಳಿಂದ ಜಿಲ್ಲಾಡಳಿತ ನಿರ್ಲಕ್ಷದಿಂದ ಕೆಲಸ ಕಳೆದುಕೊಂಡ ಕಟ್ಟಡ ಕಾರ್ಮಿಕರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಬಳಿಕ ಈ ಕುರಿತ ಮನವಿಯನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಿಐಟಿಯು ಹಿರಿಯ ಮುಖಂಡರಾದ ಕೆ.ಶಂಕರ್, ಯು.ದಾಸ ಭಂಡಾರಿ, ರಮೇಶ್ ಗುಲ್ವಾಡಿ, ಸಂತೋಷ್ ಹೆಮ್ಮಾಡಿ, ಅರುಣ್ ಕುಮಾರ್, ಚಿಕ್ಕ ಮೊಗವೀರ, ಸುಧಾಕರ ಕುಂಭಾಶಿ, ಸುಶೀಲಾ ಗಂಗೊಳ್ಳಿ, ವಿಜೇಂದ್ರಮೊದಲಾದವರು ಉಪಸ್ಥಿತರಿದ್ದರು.
ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮನವಿ
ಜಿಲ್ಲೆಯ ಜನರನ್ನು ಕಾಡುತ್ತಿರುವ ಮರಳು ಸಮಸ್ಯೆಯನ್ನು ಸರಕಾರ ಮಧ್ಯ ಪ್ರವೇಶಿಸಿ ಶಾಶ್ವತ ಪರಿಹಾರ ಮಾಡಬೇಕು. ಸರಕಾರವೇ ಮರಳುಗಾರಿಕೆ ನಡೆಸಿ ಎಲ್ಲರಿಗೂ ಕಡಿಮೆ ದರದಲ್ಲಿ ಮರಳು ವಿತರಣೆ ಮಾಡಬೇಕು. ಜಿಲ್ಲೆಯ ಮರಳು ವಿತರಣೆಯಲ್ಲಿ ಜಿಲ್ಲೆಯ ಜನರಿಗೆ ಆದ್ಯತೆ ಕೊಡಬೇಕು ಎಂದು ಆಗ್ರಹಿಸಿ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ಮಂಗಳವಾರ ಬೈಂದೂರು ತಹಶೀಲ್ದಾರ ಕಿರಣ್ ಗೋರಯ್ಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಉಪಾಧ್ಯಕ್ಷ ರಾಜೀವ ಪಡುಕೋಣೆ, ಮುಖಂಡರಾದ ಗಣೇಶ್ ತೊಂಡೆಮಕ್ಕಿ, ಕಾರ್ಯದರ್ಶಿ ಶ್ರೀಧರ ಉಪ್ಪುಂದ, ಮಾಧವ, ನಾಗರತ್ನ ನಾಡ, ಶೀಲಾವತಿ ಪಡುಕೋಣೆ ಮೊದಲಾದವರು ಉಪಸ್ಥತರಿದ್ದರು.







