ಅ.25: ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ದೇಶವ್ಯಾಪಿ ಧರಣಿ
ಮಂಗಳೂರು, ಅ.23: ಸಮಾನ ವೇತನ, ಸೇವಾ ಭದ್ರತೆ, ಕೆಲಸದ ಸ್ಥಳದಲ್ಲಿ ಘನತೆ, ಗುತ್ತಿಗೆ ಪದ್ಧತಿ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರಥಮ ಬಾರಿಗೆ ಆರೋಗ್ಯ ಇಲಾಖೆಯು ಎಲ್ಲ ಗುತ್ತಿಗೆ ನೌಕರರು ಅ.25ರಂದು ದೇಶವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.
ದ.ಕ. ಜಿಲ್ಲೆಯಲ್ಲೂ 450ಕ್ಕೂ ಹೆಚ್ಚಿನ ಎನ್.ಎಚ್.ಎಂ. ಗುತ್ತಿಗೆ ನೌಕರರು ಮತ್ತು 100ಕ್ಕಿಂತಲೂ ಹೆಚ್ಚಿನ ಆರೋಗ್ಯ ಇಲಾಖೆಯ ಇತರ ಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅ.25ರಂದು ಬೆಳಗ್ಗೆ 11ಗಂಟೆಗೆ ಮುಷ್ಕರ ನಡೆಸಲಿದ್ದಾರೆ.
ಜನರ ಕಲ್ಯಾಣಕ್ಕಾಗಿ ದೇಶದಲ್ಲಿ ‘ರಾಷ್ಟ್ರೀಯ ಆರೋಗ್ಯ ಮಿಷನ್’ ಸ್ಥಾಪನೆಯಾಗಿದೆ. ಹಲವು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಬರುತ್ತಿವೆ. ಆದರೆ ಈ ಮಹತ್ವದ ಉದ್ದೇಶವನ್ನು ಸಾಧಿಸಲು ಸಾರ್ವಜನಿಕ ಆರೋಗ್ಯ ಇಲಾಖೆಯನ್ನು ಮತ್ತಷ್ಟು ಸಶಕ್ತಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಿಷ್ಠೆಯಿಂದ ಕೆಲಸ ಮಾಡಲು ಆರೋಗ್ಯ ಇಲಾಖೆಯಡಿ ಕೆಲಸ ಮಾಡುತ್ತಿರುವ ಎನ್.ಎಚ್.ಎಂ ಮತ್ತು ಇತರ ಸಾವಿರಾರು ಗುತ್ತಿಗೆ ನೌಕರರೆಲ್ಲರೂ ಪಣ ತೊಟ್ಟಿದ್ದಾರೆ.
ಆದರೆ ಕೆಲಸದ ಜಾಗದಲ್ಲಿ ತಾರತಮ್ಯ, ಸಂಬಳದ ಅನಿಶ್ಚಿತತೆ, ಮೂರು ತಿಂಗಳ ಬಾಂಡ್, ವರ್ಷಕ್ಕೊಂದು ದಿನ ಬ್ರೇಕ್ ಇನ್ ಸರ್ವಿಸ್ ರೀತಿಯ ವಿವಿಧ ರೀತಿಯ ಅತಂತ್ರತೆಯಿಂದ ಸದಾಕಾಲ ಹತ್ತು ಹಲವು ರೀತಿಯ ಸಮಸ್ಯೆಗಳನ್ನು ಗುತ್ತಿಗೆ ನೌಕರರು ಎದುರಿಸಬೇಕಾಗುತ್ತದೆ. ಅಲ್ಲದೆ, ಗುತ್ತಿಗೆಯಲ್ಲಿರುವವರು ಇದ್ದಕ್ಕಿದ್ದಂತೆ ಹೊರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಧರಣಿ ನಡೆಸಲು ಗುತ್ತಿಗೆ ನೌಕರರು ಮುಂದಾಗಿದ್ದಾರೆ.
ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿರುವುದರಿಂದ ಪ್ರಮುಖ ಚಟುವಟಿಕೆಗಳಿಗೆ ಅವರೇ ಇರಬೇಕು. ಜೀತ ವ್ಯವಸ್ಥೆಯ ಬದಲಾದ ರೂಪದಂತಿರುವ ಗುತ್ತಿಗೆ ಪದ್ಧತಿಯೇ ಒಂದು ಅಸಾಂವಿಧಾನಿಕ ವ್ಯವಸ್ಥೆಯಾಗಿದೆ. ತಮ್ಮ ದುಡಿಯುವ ಆಯಸ್ಸಿನ ಬಹುಭಾಗವನ್ನು ಇಲಾಖೆಯೊಂದರಲ್ಲಿ ಗುತ್ತಿಗೆ ನೌಕರರಾಗಿ ದುಡಿದು, ಒಂದು ದಿನ ಇದ್ದಕ್ಕಿದ್ದಂತೆ ಇಲಾಖೆಗೆ ಸಂಬಂಧವೇ ಇಲ್ಲದಂತೆ ಹೊರದೂಡಲ್ಪಡುವುದು ಅಮಾನವೀಯವಾಗಿದೆ. ಅದರಲ್ಲೂ ಮಾದರಿ ಉದ್ಯೋಗದಾತ ಆಗಿರಬೇಕಾದ ಸರಕಾರದ ಇಲಾಖೆಗಳಲ್ಲೇ ಈ ರೀತಿ ಇರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೇದಿಕೆಯು ಪ್ರಕಟನೆಯಲ್ಲಿ ತಿಳಿಸಿದೆ.
ಪ್ರಮುಖ ಬೇಡಿಕೆಗಳು:
►60 ವರ್ಷದವರೆಗೆ ಸೇವಾ ಭದ್ರತೆ
►ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ
►ಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆಯಬಾರದು
►ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು.







