ವಿದ್ಯಾಥಿಗಳಿಗೆ ಸಾಮರಸ್ಯ ಮೂಡಿಸುವ ಶಿಕ್ಷಣ ನೀಡಬೇಕು : ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್
ದಾರುನ್ನೂರು ಯೂತ್ ಟೀಂ ಸಮಾವೇಶ

ಮೂಡುಬಿದಿರೆ,ಅ.23: ಶಿಕ್ಷಣ ಮತ್ತು ಸಂಸ್ಥೆಯ ಮೂಲಕ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆಯಬೇಕು. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಶಾಂತಿಯನ್ನು ಹೋಗಲಾಡಿಸಿ ಸಾಮರಸ್ಯ ಮೂಡಿಸುವ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು' ಎಂದು ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.
ಅವರು ಮಂಗಳವಾರ ಇಲ್ಲಿನ ಸಮಾಜ ಮಂದಿರದಲ್ಲಿ ನಡೆದ ದಾರುನ್ನೂರು ಎಜುಕೇಶನ್ ಸೆಂಟರ್ ಕಾಶಿಪಟ್ಣ ಇದರ ಮೂಡುಬಿದಿರೆ ವಲಯ ಮಹಾಸಭೆಯ ಸಮಾರಂಭ ಮತ್ತು ದಾರುನ್ನೂರು ಯೂತ್ ಟೀಂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ `ಸಂಸ್ಥೆಯ ನೂತನ ವಾಹನವನ್ನು ಸೇವೆಗೆ ಬಿಡುಗಡೆ ಮಾಡಿ ನಂತರ ಮಾತನಾಡಿದ ಅವರು, ನಾವೆಲ್ಲಾ ಧರ್ಮದ ಚೌಕಟ್ಟಿನಲ್ಲಿ ಬದುಕು ನಡೆಸಿಕೊಂಡು ಬಂದವರು. ವಿದ್ಯೆಯ ಜತೆಗೆ ಧರ್ಮದ ಬೋಧನೆಯು ನಡೆಯಬೇಕು. ಧರ್ಮದ ಸಾರವನ್ನು ಅರಿತು ಸಾಮರಸ್ಯದಿಂದ ಬದುಕಲು ಎಲ್ಲ ಧರ್ಮದ ಹಿರಿಯರು ಪ್ರೇರಣೆಯಾಗಬೇಕು. ದಾರುನ್ನೂರು ವಿದ್ಯಾ ಸಂಸ್ಥೆಯಿಂದ ಇಂತಹ ಮೌಲ್ಯಾಧಾರಿತ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಲಿ' ಎಂದರು.
ದಾರುನ್ನೂರು ವಲಯ ಸಮಿತಿ ಅಧ್ಯಕ್ಷ ಹಾಜಿ ಡಿ.ಎ ಉಸ್ಮಾನ್ ಅಧ್ಯಕ್ಷತೆ ವಹಿಸಿದರು. ಸಮಿತಿ ಗೌರವ ಅಧ್ಯಕ್ಷ ಅಬ್ದುಲ್ ಖಾದರ್, ಸಂಸ್ಥೆಯ ಕೇಂದ್ರ ಸಮಿತಿ ಜನರಲ್ ಮೆನೇಜರ್ ಎ.ಅಬ್ದುಲ್ ರೆಹ್ಮಾನ್, ಜಿಲ್ಲಾ ಮದ್ರಸ ಮೆನೇಜ್‍ಮೆಂಟ್ ಅಧ್ಯಕ್ಷ ಐ.ಮೊಯ್ದಿನಬ್ಬ, ವಕ್ಫ್ ಬೋರ್ಡ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಹುಲ್ ಹಮೀದ್, ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಹೆಚ್ ಮುಹ್ಮದ್ ಇಕ್ಬಾಲ್, ಅಬುಲ್ ಅಲಾ ಪುತ್ತಿಗೆ, ಸಿ.ಹೆಚ್ ಗಫೂರ್ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಜಿ ಮುಹ್ಮದ್ ಸ್ವಾಗತಿಸಿದರು. ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಮಾತನಾಡಿದರು. ಯೂಸೂಫ್ ಮಿಜಾರು ನಿರೂಪಿಸಿದರು. ಹಾಜಿ ಅಹ್ಮದ್ ಹುಸೈನ್ ವಂದಿಸಿದರು.







