ನರೇಗಾ ಯೋಜನೆಯ ಗುರಿ ಶೀಘ್ರವಾಗಿ ಪೂರೈಸಿ : ಶಾಸಕ ಸಂಜೀವ ಮಠಂದೂರು
ಪಿಡಿಒ ಪ್ರಗತಿ ಪರಿಶೀಲನಾ ಸಭೆ

ಪುತ್ತೂರು,ಅ.23: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉದ್ಯೋಗ ಸಿಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷಿ ಯೋಜನೆಯಾದ ನರೇಗಾ ಯೋಜನೆಯ ಗುರಿಯನ್ನು ಶೀಘ್ರವಾಗಿ ಪೂರೈಸಿ. ಮುಂದೆ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ನೀತಿ ಸಂಹಿತೆ ಜಾರಿಯಾದಲ್ಲಿ ಕಾಮಗಾರಿಗೆ ಅಡ್ಡಿಯಾಗಬಹುದು. ಈ ಹಿನ್ನಲೆಯಲಿ ಜನವರಿ ಅಂತ್ಯದ ಒಳಗಾಗಿ ನರೇಗಾ ಯೋಜನೆಯ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ನಡೆಸಿ ಎಂದು ಶಾಸಕ ಸಂಜೀವ ಮಠಂದೂರು ಅವರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮಂಗಳವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಳೀಯ ಯುವಕ ಯುವತಿ ಮಂಡಲಗಳು, ಸ್ವಸಹಾಯ ಸಂಘಗಳು ಇನ್ನಿತರ ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಂಡು ಗುರಿಯನ್ನು ಸುಲಭವಾಗಿ ತಲುಪುವ ಸಾಧ್ಯತೆಗಳು ಕಂಡುಕೊಳ್ಳಿ. ನರೇಗಾ ಯೋಜನೆಯ ಮೂಲಕ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಇನ್ನಿತರ ಸಾಮಾಜಿಕ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಅವರು ತಿಳಿಸಿದರು.
ಸಾಮಾಜಿಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಾಲೆ, ಅಂಗನವಾಡಿಗಳಲ್ಲಿ ಎಕರೆಗಟ್ಟಲೆ ಖಾಲಿ ಜಾಗಗಳಿದ್ದು, ಅಲ್ಲಿ ನರೇಗಾ ಯೋಜನೆಯಲ್ಲಿ ಕೃಷಿ ಹೊಂಡ, ಕೃಷಿ ಚಟುವಟಿಕೆ ನಡೆಸಲು ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಶಾಲೆಗಳಲ್ಲಿ ಅಡಿಕೆ ಕೃಷಿಯನ್ನು ಮಾಡಿದಲ್ಲಿ ನಿರೀಕ್ಷಿತ ಆದಾಯಗಳನ್ನು ಪಡೆದುಕೊಳ್ಳಲು ಅವಕಾಶಗಳಿವೆ. ಮೂಲಕ ಶಾಲೆ ಮತ್ತು ಅಂಗನವಾಡಿಗಳನ್ನು ಮಾದರಿಯಾಗಿ ರೂಪಿಸಬಹುದು. ಪಿಡಿಒಗಳು ಸಾಧನೆಯ ಮೂಲಕ ಸಾಮ್ಯತೆಯನ್ನು ಕಾಣಬೇಕು ಎಂದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್ ಮಾತನಾಡಿ ನರೇಗಾ ಯೋಜನೆಯಲ್ಲಿ ಫಲಾನುಭವಿಗಳು ತೊಡಗಿಸಿಕೊಳ್ಳಲು ಜಾಬ್ ಕಾರ್ಡ್ ಮಾಡಿಸ ಬೇಕಾಗಿರುವುದು ಅಗತ್ಯವಾಗಿದೆ. ಆದರೆ ಮಾಹಿತಿ ಕೊರತೆಯಿಂದ ಇನ್ನೂ ಜಾಬ್ ಕಾರ್ಡ್ ಮಾಡಿಸುತ್ತಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ನೀಡಿ ತಳಮಟ್ಟದ ಜನರಿಗೆ ಯೋಜನೆಯ ಪ್ರಯೋಜನವನ್ನು ತಲುಪಿಸುವ ಪ್ರಯತ್ನ ನಡೆಸಬೇಕು. ಹೆಚ್ಚು ಜನರು ಜಾಬ್ ಕಾರ್ಡ್ ಮಾಡುವಂತೆ ಪ್ರೇರಣೆ ನೀಡಬೇಕು. ಈ ಮೂಲಕ ಗುರಿಯನ್ನು ಹೆಚ್ಚು ಮಾಡುತ್ತಾ ಹೋಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್, ತಾ,ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಾ.ಪಂ. ಇಒ ಜಗದೀಶ್, ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕ ನವೀನ್ ಭಂಡಾರಿ ಉಪಸ್ಥಿತರಿದ್ದರು.







