ಲಂಚ ಪ್ರಕರಣ: ಸಿಬಿಐ ಅಧಿಕಾರಿ ದೇವೇಂದ್ರ ಕುಮಾರ್ ನ್ಯಾಯಾಲಯಕ್ಕೆ ಹಾಜರು

ಹೊಸದಿಲ್ಲಿ,ಅ.23: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಶಾಮೀಲಾಗಿದ್ದಾರೆ ಎನ್ನಲಾದ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಕುಮಾರ್ ಅವರನ್ನು ಸಿಬಿಐ ಮಂಗಳವಾರ ದಿಲ್ಲಿ ನ್ಯಾಯಾಲಯದಲ್ಲಿ ಹಾಜರುಪಡಿಸಿತು. ಕುಮಾರ್‌ರನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕೆಂದು ಮನವಿ ಮಾಡಿದ ತನಿಖಾ ಸಂಸ್ಥೆ, ಬಂಧಿತ ಅಧಿಕಾರಿಯ ಕಚೇರಿ ಮತ್ತು ನಿವಾಸಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ದೋಷಪೂರಿತ ದಾಖಲೆಗಳು ಮತ್ತು ಸಾಕ್ಷಿಗಳು ಪತ್ತೆಯಾಗಿದೆ ಎಂದು ವಿಶೇಷ ಸಿಬಿಐ ನ್ಯಾಯಾಧೀಶ ಸಂತೋಷ್ ಸ್ನೇಹಿಗೆ ತಿಳಿಸಿದ್ದಾರೆ. ದೇವೇಂದ್ರ ಕುಮಾರ್, ತನಿಖೆಯ ಹೆಸರಲ್ಲಿ ನಡೆಸಲಾಗುತ್ತಿದ್ದ ಸುಲಿಗೆ ಜಾಲದ ಭಾಗವಾಗಿದ್ದರು ಎಂದು ಸಿಬಿಐ ಆರೋಪಿಸಿದೆ.
ಈ ಆರೋಪವನ್ನು ನಿರಾಕರಿಸಿದ ಕುಮಾರ್ ಪರ ವಕೀಲರು ತನ್ನ ಕಕ್ಷೀದಾರನಿಗೆ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಕುಮಾರ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಇನ್ನಷ್ಟು ವಿಧಿಗಳಡಿ ಎಫ್‌ಐಆರ್ ದಾಖಲಿಸಲು ಸಿಬಿಐ ನ್ಯಾಯಾಲಯದ ಅನುಮತಿಯನ್ನು ಕೇಳಿದೆ. ಮಾಂಸ ರಫ್ತುದಾರ ಮೊಯಿನ್ ಕುರೇಶಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಹಳಿತಪ್ಪಿಸುವ ಉದ್ದೇಶದಿಂದ ತನ್ನ ವಿರುದ್ಧ ಸುಳ್ಳು ಅರೋಪ ಹೊರಿಸಲಾಗಿದೆ ಎಂದು ಕುಮಾರ್ ಆರೋಪಿಸಿದ್ದಾರೆ.





