ಪುತ್ತೂರು : ಮನೆಗೆ ನುಗ್ಗಿ ಕಳ್ಳತನ ಯತ್ನ
ಪುತ್ತೂರು,ಅ.23: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬೀಗ ಒಡೆದು ಒಳನುಗ್ಗಿ ಕಳವು ನಡೆಸಿದ ಘಟನೆ ಪುತ್ತೂರು ನಗರದ ಬಳಿಯಲ್ಲಿನ ಮನೆಯೊಂದರಲ್ಲಿ ನಡೆದಿದ್ದು, ಮಂಗಳವಾರ ಸ್ಥಳೀಯರು ಗಮನಿಸಿದ ಹಿನ್ನಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಮಾಲಕಿ ಒಬ್ಬಂಟಿ ಮಹಿಳೆ ವಾಸವಾಗಿದ್ದು ಅವರು ಊರಿನಲ್ಲಿ ಇಲ್ಲದ ಕಾರಣ ಕಳವಾದ ಸೊತ್ತುಗಳ ವಿವರ ಲಭ್ಯವಾಗಿಲ್ಲ.
ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯ ನಿವಾಸಿ ದಿವಂಗತ ಈಶ್ವರ ಭಟ್ ಅವರ ಪತ್ನಿ ಸರಸ್ವತಿ ಭಟ್ ಅವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದ್ದು, ಸರಸ್ವತಿ ಭಟ್ ಅವರ ಇಬ್ಬರು ಪುತ್ರರಲ್ಲಿ ಒಬ್ಬರು ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದಾರೆ. ಇನ್ನೊಬ್ಬ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅಲ್ಲೇ ನೆಲೆಸಿದ್ದಾರೆ. ಈ ಹಿನ್ನಲೆಯಲ್ಲಿ ಕೊಂಬೆಟ್ಟಿನ ಮನೆಯಲ್ಲಿ ಒಬ್ಬಂಟಿಯಾಗಿ ವಾಸ್ತವ್ಯವಿದ್ದ ಸರಸ್ವತಿ ಅವರು 15 ದಿನಗಳ ಹಿಂದೆ ಮನೆಗೆ ಬೀಗ ಹಾಕಿ ಬೆಂಗಳೂರಿನಲ್ಲಿರುವ ತನ್ನ ಪುತ್ರನ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡು ಕಳ್ಳರು ಈ ಕೃತ್ಯ ಎಸಗಿದ್ದಾರೆ.
ಮಂಗಳವಾರ ಸರಸ್ವತಿ ಭಟ್ ಅವರ ಮನೆಯ ಬಾಗಿಲು ತೆರೆದಿಟ್ಟ ಸ್ಥಿತಿಯಲ್ಲಿದ್ದುದ್ದನ್ನು ಗಮನಿಸಿದ ಸ್ಥಳೀಯರು ಈ ವಿಚಾರವನ್ನು ಸ್ಥಳೀಯ ನಗರಸಭೆಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರ ಗಮನಕ್ಕೆ ತಂದಿದ್ದರು. ಅವರು ಘಟನೆಯ ಪುತ್ತೂರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪುತ್ತೂರು ನಗರ ಠಾಣೆಯ ಇನ್ಸ್‍ಪೆಕ್ಟರ್ ತಿಮ್ಮಪ್ಪ ನಾಯ್ಕ, ಕ್ರೈಂ ವಿಭಾಗದ ಎಸ್‍ಐ ರುಕ್ಮಯ್ಯ ಮೂಲ್ಯ ಹಾಗೂ ಸಿಬ್ಬಂದಿ ಕಳವು ನಡೆದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಳ್ಳರು ಮನೆಯ ಎದುರು ಬಾಗಿಲಿನ ಲಾಕ್ ಮುರಿದು ಒಳಪ್ರವೇಶಿಸಿ, ಹಣ ಮತ್ತು ಆಭರಣಕ್ಕಾಗಿ ಮನೆಯೊಳಗಿನ ಕಪಾಟು, ಶೋಕೇಸ್, ಗೋದ್ರೇಜ್‍ಗಳಲ್ಲಿ ಹುಡುಕಾಡಿ ಅದರೊಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡು ಬಂದಿದೆ.
ಘಟನೆಯ ಕುರಿತು ಪರಿಶೀಲಿಸುವಂತೆ ಸರಸ್ವತಿ ಅವರ ಸಹೋದರ ಪದ್ಮನಾಭ ಭಟ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.







