ಗಾಂಧೀಜಿ ದೃಷ್ಟಿಯಲ್ಲಿ ಧರ್ಮ, ಪ್ರಜಾಪ್ರಭುತ್ವ ನವೀಕರಣಕ್ಕೆ ಒಳಗಾಗುವ ಪ್ರಕ್ರಿಯೆ: ಚಿಂತಕ ಗೋವಿಂದರಾವ್
ಬೆಂಗಳೂರು, ಅ.23: ಮಹಾತ್ಮ ಗಾಂಧೀಜಿಯ ದೃಷ್ಟಿಯಲ್ಲಿ ಸಂಸ್ಕೃತಿ, ಧರ್ಮ ಮತ್ತು ಪ್ರಜಾಪ್ರಭುತ್ವ ಈ ಮೂರು ನಿರಂತರವಾಗಿ ನವೀಕರಣಕ್ಕೆ ಒಳಗಾಗುವ ಪ್ರಕ್ರಿಯೆಗಳಾಗಿದ್ದವು ಎಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಅಭಿಪ್ರಾಯಿಸಿದರು.
ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ತತ್ವ ಮತ್ತುಚಿಂತನೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧಿ ವ್ಯಕ್ತಿತ್ವ ಪ್ರಕೃತಿಗೆ ಹೆಚ್ಚು ಹತ್ತಿರವಾದದ್ದು. ದುರದೃಷ್ಟವಶಾತ್ ಇಂದು ನಮ್ಮ ಗುರುಗಳು, ತಂದೆತಾಯಿಗಳು ಹಾಗೂ ನಮ್ಮ ಸಮಾಜ ನಮ್ಮನ್ನು ಪ್ರಕೃತಿಯಿಂದ ದೂರಗೊಳಿಸುತ್ತಿದೆ. ಹೀಗಾಗಿ ಗಾಂಧೀಜಿ ಬದುಕನ್ನು ಸರಿಯಾದ ದೃಷ್ಟಿಕೋನದಲ್ಲಿ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ಪರಿಸರ ಚಿಂತಕ ನಾಗೇಶ ಹೆಗಡೆ ಮಾತನಾಡಿ, ಇಂದು ಪರಿಸರದಲ್ಲಿ ಉಂಟಾಗುತ್ತಿರುವ ಅನೇಕ ವೈಪರೀತ್ಯಗಳಿಗೆ ಗಾಂಧೀಜಿ ಹೇಳಿದ ಹಸಿರು ಆರ್ಥಿಕತೆಯೇ ಅಂತಿಮ ಉತ್ತರ. ಇತ್ತೀಚಿನ ದಶಕಗಳಲ್ಲಿ ವಿಶ್ವಸಂಸ್ಥೆ ಮಂಡಿಸಿರುವ ಸುಸ್ಥಿರ ಅಭಿವೃದ್ಧಿಯ ಬಹುತೇಕ ಅಂಶಗಳು ಗಾಂಧಿ ಚಿಂತನೆಗಳಿಂದಲೇ ಪ್ರೇರಣೆ ಪಡೆದವುಗಳಾಗಿವೆ ಎಂದು ತಿಳಿಸಿದರು.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿರಂತರ ಕ್ರಿಯಾಶೀಲರಾಗಿ ಪರಿಸರ ಕುರಿತ ಪ್ರಶ್ನೆಗಳನ್ನು ಮಾಧ್ಯಮದ ಗಮನಕ್ಕೆ ತರಬೇಕು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು, ಪರಿಸರ ಪರವಾದ ಆಂದೋಲನ ನಡೆಯಬೇಕಿದೆ ಎಂದು ಅವರು ಆಶಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಪ್ರೊ.ಮೀನಾ ದೇಶಪಾಂಡೆ ಮಾತನಾಡಿದರು. ಕವಿ ಕಂಡ ಗಾಂಧೀಜಿ ದೃಶ್ಯ ಕಲಾ ರೂಪಕವನ್ನು ಗಿರಿಜಾ ಪಿ. ಸಿದ್ಧಿ ಮತ್ತು ಲೋಕಚರಿತ ತಂಡದವರು ನಡೆಸಿಕೊಟ್ಟರು. ಸಂವಾದಗೋಷ್ಠಿಯಲ್ಲಿ ವಿಮರ್ಶಕರಾದ ಡಾ. ಆಶಾದೇವಿ, ದಂಡಪ್ಪ, ಪ್ರೊ.ಎಸ್. ಆರ್.ಕೇಶವ ವಿಚಾರ ಮಂಡಿಸಿದರು. ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಟರಾಜ್ ಹುಳಿಯಾರ್, ಕುಲಸಚಿವ ಡಾ.ಬಿ.ಕೆ. ರವಿ ಮುಖ್ಯ ಅತಿಥಿಗಳಾಗಿದ್ದರು.







