ರಾಕೇಶ್ ಅಸ್ಥಾನ ವಿರುದ್ಧ ತನಿಖೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಚ್ಚ ನ್ಯಾಯಾಲಯ ಆದೇಶ

ಹೊಸದಿಲ್ಲಿ,ಅ.23: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ವಿರುದ್ಧ ನಡೆಯುತ್ತಿರುವ ಅಪರಾಧಿ ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಸಿಬಿಐಗೆ ಆದೇಶಿಸಿದೆ. ಸದ್ಯ ಅಸ್ಥಾನಾ ವಿರುದ್ಧ ನಡೆಯುತ್ತಿರುವ ತನಿಖೆಗೆ ತಡೆಯನ್ನು ವಿಧಿಸಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧಿತರಾಗಿರುವ ಸಹಾಯಕ ವರಿಷ್ಠಾಧಿಕಾರಿ ದೇವೇಂದ್ರ ಕುಮಾರ್ ಮತ್ತು ಅಸ್ಥಾನಾ ಸಲ್ಲಿಸಿರುವ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ಸಿಬಿಐ ಮತ್ತು ಅದರ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಮತ್ತು ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಅವರಿಗೆ ನ್ಯಾಯಾಧೀಶ ನಜ್ಮಿ ವಝೀರಿ ಸೂಚಿಸಿದ್ದಾರೆ. ಸಿಬಿಐ ಆಡಳಿತ ವಿಭಾಗವಾಗಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೂ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಅಸ್ಥಾನಾ ಮತ್ತು ಕುಮಾರ್ ತಮ್ಮ ಬಳಿಯಿರುವ ಪ್ರಕರಣದ ದಾಖಲೆಗಳನ್ನು ಮತ್ತು ಮೊಬೈಲ್ ದಾಖಲೆಗಳನ್ನು ರಕ್ಷಿಸಿಡುವಂತೆ ನ್ಯಾಯಾಲಯ ಸೂಚಿಸಿದೆ.
ಅಸ್ಥಾನಾ ವಿರುದ್ಧ ಮಾಡಲಾಗಿರುವ ಆರೋಪವು ಗಂಭೀರವಾಗಿದ್ದು, ಸಂಸ್ಥೆಯು ಈ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಸದ್ಯದಲ್ಲೇ ಎಫ್‌ಐಆರ್‌ನಲ್ಲಿ ಹೆಚ್ಚು ಅಪರಾಧಗಳನ್ನು ಸೇರಿಸಲಿದೆ ಎಂದು ಸಿಬಿಐ ನ್ಯಾಯಾಲಯದಲ್ಲಿ ತಿಳಿಸಿದೆ. ಆರೋಪಿಯ ಹೇಳಿಕೆಯ ಆಧಾರದಲ್ಲಿ ಸಿಬಿಐ ವಿಶೇಷ ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಕಾನೂನುಬಾಹಿರ ಎಂದು ಅಸ್ಥಾನಾ ಪರ ವಕೀಲ ಅಮರೇಂದ್ರ ಶರಣ್ ತಿಳಿಸಿದ್ದಾರೆ. ತನ್ನ ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮವನ್ನು ತೆಗೆದುಕೊಳ್ಳದಿರುವಂತೆ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ಅಸ್ಥಾನಾ ಮನವಿ ಮಾಡಿದ್ದಾರೆ. ಅಸ್ಥಾನಾ ಮತ್ತು ಕುಮಾರ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದು ಈ ಎರಡೂ ಅರ್ಜಿಗಳನ್ನು ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಅವರಿಗೆ ಸಲ್ಲಿಸಲಾಗಿತ್ತು. ಮೆನನ್ ಈ ಅರ್ಜಿಗಳನ್ನು ನ್ಯಾಯಾಧೀಶ ವಝೀರಿಗೆ ಹಸ್ತಾಂತರಿಸಿದ್ದರು.
ಮಾಂಸ ರಫ್ತು ವ್ಯಾಪಾರಿ ಮೊಯಿನ್ ಕುರೇಶಿ ಪ್ರಕರಣದಲ್ಲಿ ಲಂಚ ಸ್ವೀಕರಿಸಿದ್ದಾರೆ ಎಂದು ಪ್ರಕರಣದ ಆರೋಪಿ ಉದ್ಯಮಿ ಸತೀಶ್ ಸನಾ ನೀಡಿದ ಹೇಳಿಕೆಯ ಆಧಾರದಲ್ಲಿ ಸಿಬಿಐ ರಾಕೇಶ್ ಅಸ್ಥಾನಾರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.







