ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ : ಹೆಜಮಾಡಿ ಗ್ರಾಮಕರಣಿಕನ ವಿರುದ್ಧ ಪ್ರಕರಣ ದಾಖಲು
ಪಡುಬಿದ್ರಿ,ಅ.23: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ಹಾಗೂ ಮೊಬೈಲ್‍ಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೆಜಮಾಡಿ ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಿಗನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪಡುಬಿದ್ರಿ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಲೆಕ್ಕಿಗ ಮಂಡ್ಯ ಮೂಲದ ಕುಮಾರಸ್ವಾಮಿ (27) ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತಿದ್ದಾರೆ. ಮನೆಯ ದಾಖಲೆಗಳ ಸರಿಪಡಿಸಲು ಈ ಹಿಂದೆ ಗ್ರಾಮಲೆಕ್ಕಿಗರಲ್ಲಿ ತೆರಳಿದ್ದಾಗ ಯುವತಿಯ ಮೊಬೈಲ್ ಸಂಖ್ಯೆ ಕುಮಾರಸ್ವಾಮಿ ಪಡೆದಿದ್ದ. ಆ ಬಳಿಕ ಯುವತಿಗೆ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತಿದ್ದ ಎಂದು ಆರೋಪಿಸಲಾಗಿದೆ.
ನೊಂದ ಯುವತಿ ಪಾಲಕರಿಗೆ ವಿಷಯ ತಿಳಿಸಿದ್ದಾಳೆ. ಅದರಂತೆ ಗ್ರಾಮಸ್ಥರೊಂದಿಗೆ ಸೇರಿ ಠಾಣೆಗೆ ಬಂದು ದೂರು ನೀಡಿದ್ದಾಳೆ. ಕುಮಾರಸ್ವಾಮಿ ಈ ಹಿಂದೆ ಯಡ್ತಾಡಿ, ಶಿವಳ್ಳಿ ಗ್ರಾಮದಲ್ಲಿ ಗ್ರಾಮಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸಿದ್ದು, ವರುಷದ ಹಿಂದೆಯಷ್ಟೇ ಹೆಜಮಾಡಿಗೆ ನಿಯುಕ್ತಿಗೊಂಡಿದ್ದಾರೆ.





