ಪ್ರಚಾರದಿಂದ ಬಿಜೆಪಿ ಎಲ್ಲಿಯೂ ಹಿಂದೆ ಸರಿದಿಲ್ಲ: ಗೋ.ಮಧುಸೂದನ್
ಬೆಂಗಳೂರು, ಅ. 23: ಉಪ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಮಂಕಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಬಿಜೆಪಿ ಎಲ್ಲಿಯೂ ತಣ್ಣಗಾಗಿಲ್ಲ, ಮೆತ್ತಗಾಗಿಲ್ಲ. ಪಕ್ಷದ ಕಾರ್ಯಕರ್ತರು ದಿನದ 24 ಗಂಟೆಯೂ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣಾ ನಿಮಿತ್ತ ಪಕ್ಷ ನಿಯೋಜಿಸಿರುವ ಉಸ್ತುವಾರಿಗಳೆಲ್ಲರೂ ಅವರವರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಉಸ್ತುವಾರಿ ನಾಯಕರೆಲ್ಲ ಪ್ರಚಾರ ಕೈಗೊಂಡಿದ್ದಾರೆ ಎಂದರು.
ಮಂಡ್ಯ ಲೋಕಸಭೆ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷದಿಂದ ಪ್ರಚಾರ ಕಾರ್ಯ ನಡೆದಿದೆ. ಕೇಂದ್ರ ಸಚಿವ ಸದಾನಂದಗೌಡ ಅವರು ಕಾರ್ಯ ನಿಮಿತ್ತ ಹೊಸದಿಲ್ಲಿಗೆ ತೆರಳಿದ್ದು, ಮತ್ತೆ ರಾಮನಗರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಮಧುಸೂದನ್ ಸ್ಪಷ್ಟಪಡಿಸಿದರು.
ಡಿಸಿಎಂ ವಿರುದ್ಧ ದೂರು: ‘ನಮ್ಮ ಅಭ್ಯರ್ಥಿಗೆ ಓಟು ಹಾಕಿದರೆ ಮಾತ್ರ ಟಾರ್ ಹಾಕಿಸ್ತೀನಿ’ ಎಂಬ ಹೇಳಿಕೆ ನೀಡುವ ಮೂಲಕ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಅವರು ಹೇಳಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಅಧಿಕಾರದಲ್ಲಿರುವ ನಾಯಕರು ಮತದಾರರಿಗೆ ಯಾವುದೇ ಭರವಸೆ ನೀಡುವಂತಿಲ್ಲ. ಆದರೆ, ಉಪ ಮುಖ್ಯಮಂತ್ರಿ ಪರಮೇಶ್ವರ್ ನೀತಿ ಸಂಹಿತೆ ಉಲ್ಲಂಘಿಸಿದ್ದು, ಆಯೋಗ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.







