ವರ್ಗಾವಣೆ ಪ್ರಕ್ರಿಯೆ ವಿಳಂಬ: ಪ್ರಕಟಗೊಳ್ಳದ ಹೆಚ್ಚುವರಿ ಶಿಕ್ಷಕರ ಪಟ್ಟಿ; ಆಕ್ರೋಶ
ಬೆಂಗಳೂರು, ಅ.23: ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ತಾಂತ್ರಿಕ ಸಮಸ್ಯೆ ಪದೇಪದೇ ಎದುರಾಗುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸೋಮವಾರವೇ ಪ್ರಕಟವಾಗಬೇಕಿದ್ದ ಪರಿಷ್ಕೃತ ಶಿಕ್ಷಕರ ಪಟ್ಟಿ ಪ್ರಕಟವಾಗಿಲ್ಲ.
ವರ್ಗಾವಣೆ ಸಾಫ್ಟ್‌ವೇರ್‌ನ ತಾಂತ್ರಿಕ ಸಮಸ್ಯೆಯಿಂದ ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟವಾಗಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿಯೂ ತಾಂತ್ರಿಕ ದೋಷಗಳಿಂದಾಗಿ ಅಭ್ಯರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಪ್ರೌಢಶಾಲಾ ವಿಭಾಗದ ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟವಾಗದೇ ಇರುವುದರಿಂದ ವರ್ಗಾವಣೆಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ವಿಳಂಬವಾಗುವ ಸಾಧ್ಯತೆ ಇದೆ ಎಂದು ಶಿಕ್ಷಕರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚುವರಿ ಶಿಕ್ಷಕರ ನಿಯೋಜನೆಯ ನಂತರ ಕಡ್ಡಾಯ ಶಿಕ್ಷಕರ ವರ್ಗಾವಣೆ ನಡೆಯಲಿದೆ. ಇದಾದ ನಂತರ ಕೋರಿಕೆ ಹಾಗೂ ಪರಿಸ್ಪರ ವರ್ಗಾವಣೆ ನಡೆಸಲಾಗುತ್ತದೆ. ಹೆಚ್ಚುವರಿ ಶಿಕ್ಷಕರ ನಿಯೋಜನೆಯಾಗದೇ ಮುಂದಿನ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ. ಹೆಚ್ಚುವರಿ ಶಿಕ್ಷಕರ ಎಲ್ಲ ಮಾಹಿತಿ ಜಿಲ್ಲಾ ಹಾಗೂ ತಾಲೂಕು ಮಟ್ಟದಿಂದ ಸಂಬಂಧಿಸಿದ ತಂತ್ರಾಂಶದ ಮೂಲಕವೇ ಸಂಗ್ರಹಿಸಲಾಗಿದೆ. ಸಾಫ್ಟ್‌ವೇರ್ ಮೂಲಕ ಪ್ರಕಟಿಸುವುದಷ್ಟೇ ಬಾಕಿ ಇದೆ. ಸಾಫ್ಟ್‌ವೇರ್ ಅಳವಡಿಸಿದ ತಕ್ಷಣವೇ ಪ್ರಕಟವಾಗಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.







