ರಾಣಿ ಚೆನ್ನಮ್ಮರ ಮನೆಯ ಜಾಗ ಅಭಿವೃದ್ಧಿ: ಸಂಸದ ಪ್ರಕಾಶ್ ಹುಕ್ಕೇರಿ

ಬೆಳಗಾವಿ, ಅ.23: ಕಾಕತಿಯಲ್ಲಿ ನೆಲಸಮವಾಗಿರುವ ಕಿತ್ತೂರು ರಾಣಿ ಚನ್ನಮ್ಮನ ಮನೆಯ ಜಾಗವನ್ನು ಸರಕಾರದ ವಶಕ್ಕೆ ಪಡೆದು, ಅಭಿವೃದ್ಧಿ ಪಡಿಸುವ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಗಳೊಂದಿಗೆ ಒಂದು ತಿಂಗಳೊಳಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಚಿಕ್ಕೋಡಿ-ಸದಲಗ ಸಂಸದ ಪ್ರಕಾಶ್ ಹುಕ್ಕೇರಿ ತಿಳಿಸಿದ್ದಾರೆ.
ಮಂಗಳವಾರ ಕಾಕತಿಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಕಿತ್ತೂರು ರಾಣಿ ಚನ್ನಮ್ಮ ಉತ್ಸವ’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಕತಿಯ ಸಮಗ್ರ ಅಭಿವೃದ್ಧಿಗೆ ತಾವು ಬದ್ಧವಾಗಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಚೆನ್ನಮ್ಮನ ಧೈರ್ಯ, ಸಾಹಸ ಅಪ್ರತಿಮವಾದದ್ದು. ಚೆನ್ನಮ್ಮನ ಆದರ್ಶಗಳನ್ನು ಯುವಜನಾಂಗ ಅಳವಡಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ಕಾಕತಿಯ ರಾಚಯ್ಯ ಸ್ವಾಮೀಜಿ ಮಾತನಾಡಿ, ಕಾಕತಿಯಲ್ಲಿ ಆಚರಿಸುವ ಚನ್ನಮ್ಮ ಉತ್ಸವಕ್ಕೆ ಸರಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
Next Story





