ಮೃತಯೋಧನ ಅಂತ್ಯಸಂಸ್ಕಾರದ ಕೆಲವೇ ಕ್ಷಣಗಳ ಮುನ್ನ ಮಗುವಿಗೆ ಜನ್ಮ ನೀಡಿದ ಪತ್ನಿ

ಶ್ರೀನಗರ, ಅ.23: ರವಿವಾರ ಗಡಿ ದಾಟಿ ಒಳನುಸುಳುವ ಪಾಕಿಸ್ತಾನೀಯರ ಯತ್ನವನ್ನು ವಿಫಲಗೊಳಿಸುವ ಸಂದರ್ಭ ಗುಂಡೇಟಿಗೆ ಬಲಿಯಾಗಿದ್ದ ಲ್ಯಾನ್ಸ್ ನಾಯ್ಕ್ ರಂಜೀತ್ ಸಿಂಗ್ ಅವರ ಮೃತದೇಹದ ಅಂತ್ಯ ಸಂಸ್ಕಾರ ಮಂಗಳವಾರ ಹುಟ್ಟೂರಿನಲ್ಲಿ ನಡೆದಿದ್ದು, ಇದಕ್ಕೆ ಸ್ವಲ್ಪ ಹೊತ್ತಿನ ಮೊದಲು ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.
ರವಿವಾರ ಕಾಶ್ಮೀರದ ಸುಂದರ್‌ಬನಿ ಕ್ಷೇತ್ರದಲ್ಲಿ ಗಡಿನಿಯಂತ್ರಣಾ ರೇಖೆಯ ಬಳಿ ಕರ್ತವ್ಯದಲ್ಲಿದ್ದ ಸಂದರ್ಭ ಪಾಕ್ ಗಡಿಯಾಚೆಯಿಂದ ಭಾರತದೊಳಗೆ ನುಸುಳುವ ಪ್ರಯತ್ನ ನಡೆಸಿದ್ದ ನುಸುಳುಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ರಂಜೀತ್ ಸಿಂಗ್ ಸಹಿತ ಮೂವರು ಯೋಧರು ಮೃತಪಟ್ಟಿದ್ದರು. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಶಸ್ತ್ರಾಸ್ತ್ರ ಸಜ್ಜಿತರಾದ, ಪಾಕ್ ಗಡಿಭದ್ರತಾ ಪಡೆಯ ಸದಸ್ಯರು ಎಂದು ಶಂಕಿಸಲಾಗಿರುವ ಇಬ್ಬರು ಮೃತಪಟ್ಟಿದ್ದರು. ಯೋಧ ರಂಜೀತ್ ಸಿಂಗ್ ಅವರ ಮೃತದೇಹವನ್ನು ಸೋಮವಾರವೇ ಹುಟ್ಟೂರಿಗೆ ಕೊಂಡೊಯ್ಯಲಾಗಿತ್ತು. ಆದರೆ ಕಾರಣಾಂತರಗಳಿಂದ ಅಂತ್ಯಸಂಸ್ಕಾರವನ್ನು ಮಂಗಳವಾರ ನಡೆಸಲು ಕುಟುಂಬದವರು ನಿರ್ಧರಿಸಿದ್ದರು.
ಈ ಮಧ್ಯೆ ಸೋಮವಾರ ರಾತ್ರಿ ರಂಜೀತ್ ಸಿಂಗ್ ಅವರ ತುಂಬುಗರ್ಭಿಣಿ ಪತ್ನಿ ಶಿಮು ದೇವಿಗೆ ಹೆರಿಗೆ ನೋವು ಬಂದಿದ್ದು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಬೆಳಗ್ಗಿನ ಜಾವ ಸುಮಾರು 5 ಗಂಟೆಗೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ದಂಪತಿಯ ಚೊಚ್ಚಲ ಮಗು ಇದಾಗಿದೆ. ಇವರ ಮದುವೆಯಾಗಿ 10 ವರ್ಷಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ರಂಜೀತ್ ಮೃತದೇಹವನ್ನು ಚಂಬಾ-ಸೆರಿಯಲ್ಲಿರುವ ದಫನ ಭೂಮಿಗೆ ಸಾಗಿಸಲಾಗಿದ್ದು ಆ ಸ್ಥಳಕ್ಕೆ ಅವರ ಬಾಣಂತಿ ಪತ್ನಿ ಹಾಗೂ ನವಜಾತ ಶಿಶುವನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಬಳಿಕ ಸಂಪೂರ್ಣ ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯಸಂಸ್ಕಾರ ನಡೆಸಲಾಗಿದೆ. 10 ವರ್ಷದ ಬಳಿಕ ತಂದೆಯಾಗುವ ಖುಷಿಯಲ್ಲಿದ್ದ ಯೋಧ ರಂಜೀತ್ ಕಡೆಗೂ ತನ್ನ ಮಗುವಿನ ಮುಖವನ್ನು ನೋಡದೆ ವಿಧಿಯ ಕ್ರೂರ ಆಟಕ್ಕೆ ತಲೆಬಾಗಬೇಕಾಯಿತು . ಈ ಘಟನೆ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.







