ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು, ಅ.23: ವಿಧಾನಸಭೆ ಚುನಾವಣೆ-2013ರ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆಯ 5 ಪ್ರಕರಣಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಇತ್ತೀಚೆಗೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಈ ಪ್ರಕರಣವನ್ನು ರದ್ದು ಕೋರಿ ಲಕ್ಷ್ಮಿ ಹೆಬ್ಬಾಳ್ಕರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಚುನಾವಣೆ ನೀತಿಸಂಹಿತೆ ಉಲ್ಲಂಘನೆಯ ನಾಲ್ಕು ಪ್ರಕರಣಗಳನ್ನು ರದ್ದುಗೊಳಿಸಿ ಹೆಬ್ಬಾಳ್ಕರ್‌ಗೆ ಬಿಗ್ ರಿಲೀಫ್ ನೀಡಿದೆ.
ಪ್ರಕರಣದ ಹಿನ್ನೆಲೆ: 2013ರ ವಿಧಾನಸಭಾ ಚುನಾವಣೆ ವೇಳೆ ಸಮಯ ಮೀರಿ ಪ್ರಚಾರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಹಿನ್ನೆಲೆ ಲಕ್ಷ್ಮಿ ಹೆಬ್ಬಾಳ್ಕರ್ ಎರಡು ಬಾರಿ ವಿಚಾರಣೆಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ವಾರೆಂಟ್ ಜಾರಿಗೊಳಿಸಿ ವಿಶೇಷ್ ಕೋರ್ಟ್ ಆದೇಶ ಹೊರಡಿಸಿತ್ತು.





