ಮನೋ ವೈದ್ಯಕೀಯ ವೃತ್ತಿಗೆ ತ್ರಿವೇಣಿ ಕಾದಂಬರಿಗಳು ಪ್ರೇರಣೆ: ಡಾ.ಸಿ.ಆರ್.ಚಂದ್ರಶೇಖರ್
ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮ

ಬೆಂಗಳೂರು, ಸೆ.23: ನನ್ನ ಮನೋವೈದ್ಯಕೀಯ ವೃತ್ತಿಯಲ್ಲಿ ತ್ರಿವೇಣಿ ಕಾದಂಬರಿಗಳು ಹಾಗೂ ಎಂ.ಶಿವರಾಮ್‌ರವರ ‘ಮನಮಂಥನ’ ಕಾದಂಬರಿ ಹೆಚ್ಚು ಪ್ರಭಾವ ಬೀರಿವೆ ಎಂದು ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ತಿಳಿಸಿದರು.
ಮಂಗಳವಾರ ಕನ್ನಡಪುಸ್ತಕ ಪ್ರಾಧಿಕಾರ ನಗರದ ಮೈಕೋ ಲೇಔಟ್‌ನಲ್ಲಿ ಆಯೋಜಿಸಿದ್ದ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಲೇಖಕಿ ತ್ರಿವೇಣಿಯವರ ಶರಪಂಜರ, ಅಪಸ್ವರ, ಬೆಳ್ಳಿಮೋಡ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿದ್ದ ಮನುಷ್ಯನ ಮಾನಸಿಕ ತುಮುಲಗಳನ್ನು ಓದುತ್ತಾ ನಾನು ಮನೋವೈದ್ಯನಾಗಬೇಕೆಂದು ನಿಶ್ಚಯಿಸಿದೆ. ಹಾಗೂ ನಿರಂತರವಾದ ಓದುವ ಹವ್ಯಾಸದಿಂದಾಗಿ ಬರೆಯಲು ಸಾಧ್ಯವಾಯಿತು ಎಂದು ಅವರು ಅಭಿಪ್ರಾಯಿಸಿದರು.
ಆಪ್ತ ಸಲಹೆಗಾರ ಸಿ.ದೊರೆಸ್ವಾಮಿ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರ ‘ಅಳಿದ ಮೇಲೆ’ ಕೃತಿ ನನ್ನ ಬದುಕನ್ನು ಪರಾಮರ್ಶಿಸಿದ ಕೃತಿಯಾಗಿದೆ. ಈ ಕಾದಂಬರಿಯನ್ನು ಓದಿದ ನಂತರ ಮರಣದ ಬಳಿಕ ‘ದೇಹದಾನ’ ಮಾಡಲು ನಿಶ್ಚಯಿಸಿದ್ದೇನೆಂದು ತಿಳಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ಪುಸ್ತಕ ಪ್ರಾಧಿಕಾರದ ಬೆಳ್ಳಿ ಹಬ್ಬದ ಪ್ರಯುಕ್ತ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇದರಿಂದ ಯುವಜನತೆಯನ್ನು ಒಳಗೊಂಡಂತೆ ಎಲ್ಲರಿಗೂ ಪುಸ್ತಕಗಳ ಮಹತ್ವ ಕುರಿತು ಅರಿವು ಮೂಡಿಸುವುದಾಗಿದೆ ಎಂದು ತಿಳಿಸಿದರು.
ಕಮ್ಯೂನಿಸ್ಟ್ ಸಿದ್ಧಾಂತವನ್ನು ರೂಪಿಸಿದ್ದ ಕಾರ್ಲ್ ಮಾರ್ಕ್ಸ್ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಲಂಡನ್ ಗ್ರಂಥಾಲಯದಲ್ಲಿದ್ದ ಎಲ್ಲ ಪುಸ್ತಕಗಳನ್ನು ಸಂಪೂರ್ಣವಾಗಿ ಓದಿದ್ದರು. ಇದರಿಂದಾಗಿಯೆ ಜಗತ್ತಿಗೆ ಅತ್ಯುತ್ತಮ ಚಿಂತನೆಗಳನ್ನು ಧಾರೆಯೆರೆಯಲು ಸಾಧ್ಯವಾಯಿತು. ಅದೇ ಮಾದರಿಯಲ್ಲಿ ಯುವಪೀಳಿಗೆ ಪುಸ್ತಕಗಳತ್ತ ಮುಖ ಮಾಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿ ಎ.ಎಸ್.ರಾಮಚಂದ್ರ ಉಪಸ್ಥಿತರಿದ್ದರು. ಈ ವೇಳೆ 50ಮಂದಿಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.







