ಕಿತ್ತೂರು ಉತ್ಸವ: ಸಂಗೊಳ್ಳಿ ರಾಯಣ್ಣ-ಅಮಟೂರು ಬಾಳಪ್ಪ ಪುತ್ಥಳಿ ಅನಾವರಣ

ಬೆಳಗಾವಿ, ಅ.23: ವೀರರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವದ ದ್ಯೋತಕವಾಗಿ ಜಿಲ್ಲೆಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಬರಮಾಡಿಕೊಳ್ಳುವುದರೊಂದಿಗೆ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಮಂಗಳವಾರ ಅದ್ಧೂರಿ ಚಾಲನೆ ದೊರೆಯಿತು.
ರಾಜ್ಯ ಸರಕಾರದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ, ಕಿತ್ತೂರಿನ ಮಹಾದ್ವಾರದ ಬಳಿ ವೀರಜ್ಯೋತಿ ಹೊತ್ತು ಬಂದ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಜ್ಯೋತಿ ಬರಮಾಡಿಕೊಂಡರು. ಆನಂತರ, ಅಶ್ವರೂಢ ಕಿತ್ತೂರು ಚನ್ನಮ್ಮ ಪುತ್ಥಳಿ ಎದುರು ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೇರವೇರಿಸಿದರು.
ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ: ಇದೇ ಮೊದಲ ಬಾರಿಗೆ ಉತ್ಸವದಲ್ಲಿ ಆಯೋಜಿಸಲಾಗಿರುವ ಹೆಲಿಟೂರಿಸಂಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಚಾಲನೆ ನೀಡಿದರು. ಹೆಲಿಕಾಪ್ಟರ್‌ನಲ್ಲಿಯೇ ಬಂದ ಅವರು ಕಿತ್ತೂರು ಚನ್ನಮ್ಮ ಪುತ್ಥಳಿಗೆ ಮೇಲಿನಿಂದಲೆ ಪುಷ್ಪಾರ್ಚನೆಗೈದರು.
ಪುತ್ಥಳಿಗಳ ಅನಾವರಣ: ಕಿತ್ತೂರು ಮಹಾದ್ವಾರದ ಎದುರು ಸ್ಥಾಪಿಸಲಾಗಿರುವ ಚನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರು ಬಾಳಪ್ಪಅವರ ಪುತ್ಥಳಿಗಳನ್ನು ಗಣೇಶ್ ಹುಕ್ಕೇರಿ ಅನಾವರಣಗೊಳಿಸಿದರು.
ಭವ್ಯ ಮೆರವಣಿಗೆ: ರಾಜ್ಯದ ವಿವಿಧ ಪ್ರದೇಶಗಳ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ 35 ಕಲಾತಂಡಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು. ಬೆಂಗಳೂರಿನ ಪೂಜಾ ಕುಣಿತ, ಮಹಿಳಾ ಝಾಂಜ್ ಪಥಕ್, ಡೊಳ್ಳುಕುಣಿತ, ಕೋಲಾಟ, ಕರಡಿ ಮಜಲು ಕಲಾತಂಡಗಳು ಜನರನ್ನು ಆರ್ಕಷಿಸಿದವು. ಪೂರ್ಣ ಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯೊಂದಿಗೆ ಸಾಗಿದರು. ಕಿತ್ತೂರು ಚೆನ್ನಮ್ಮನ ಮಹಾದ್ವಾರದಿಂದ ಆರಂಭಗೊಂಡ ಮೆರವಣಿಗೆಯು ನಿಚ್ಚಣಿಕೆ ಮಠದವರೆಗೆ ತೆರಳಿತು.
ವಾರ್ತಾ ಇಲಾಖೆ ಮಳಿಗೆ ಉದ್ಘಾಟನೆ: ಕೋಟೆ ಆವರಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ನಿರ್ಮಿಸಲಾಗಿರುವ ವಸ್ತುಪ್ರದರ್ಶನ ಮಳಿಗೆಗಳನ್ನು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರದರ್ಶನ ಮಳಿಗೆಯನ್ನು ಗಣೇಶ್ ಹುಕ್ಕೇರಿ ಹಾಗೂ ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸಿದರು.
ಕೃಷಿಯಾಧಾರಿತ ಮಳಿಗೆ, ಸ್ವಯಂ ಸೇವಾ ಸಂಘಗಳು, ಕೃಷಿ ಯಂತ್ರೋಪಕರಣಗಳು, ನೀರಾವರಿ ಸಲಕರಣೆಗಳು, ರೇಷ್ಮೆ ಕೃಷಿ, ಬೀಜ-ಗೊಬ್ಬರ, ಕೀಟನಾಶಕಗಳ ಮಳಿಗೆ, ಸಾವಯವ ಉತ್ಪನ್ನಗಳು, ಖಾದಿ ಬಟ್ಟೆಗಳು, ಕಂಬಳಿ, ತರಹೇವಾರಿ ಸುವಾಸನೆಯ ಅಗರಬತ್ತಿಗಳು, ಧನ್ವಂತರಿ ಔಷಧಿ ಉತ್ಪನ್ನಗಳು, ನಂದಿನಿ ಹಾಲಿನ ಉತ್ಪನ್ನ, ಆಹಾರ ಮಳಿಗೆ ಸೇರಿದಂತೆ 100ಕ್ಕೂ ಅಧಿಕ ಮಳಿಗೆಗಳನ್ನು ಅವರು ವೀಕ್ಷಿಸಿದರು.
ಚೆನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮಿ ಹೆಬ್ಬಾಳ್ಕರ್, ಪಟ್ಟಣ ಪಂಚಾಯತ್ ಅಧ್ಯಕ್ಷ ಹನೀಫ್ ಸುತಗಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಶೈಲಾ ಸಿದ್ರಾಮಣಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಬೈಲಹೊಂಗಲ ಉಪ ಭಾಗಾಧಿಕಾರಿ ಶಿವಾನಂದ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.







