ಮಸೂದ್ ಅಝರ್‌ನನ್ನು ಭಯೋತ್ಪಾದಕ ಪಟ್ಟಿಗೆ ಸೇರಲು ಬಿಡುವುದಿಲ್ಲ: ಚೀನಾ

ಬೀಜಿಂಗ್, ಅ. 23: ಭಾರತದೊಂದಿಗಿನ ತನ್ನ ಮೊದಲ ಆಂತರಿಕ ಭದ್ರತಾ ಸಹಕಾರ ಒಪ್ಪಂದವು ಗಡಿಯಾಚೆಗಿನ ಅಪರಾಧಗಳ ವಿರುದ್ಧ ಹೋರಾಡಲು ಸಾಂಸ್ಥಿಕ ಖಾತರಿಯನ್ನು ನೀಡುತ್ತದೆ ಎಂದು ಚೀನಾ ಇಂದು ಹೇಳಿದೆ. ಆದರೆ, ಪಾಕಿಸ್ತಾನದ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನವನ್ನು ತಡೆಯುವ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದೆ.
ಹೊಸದಿಲ್ಲಿಯಲ್ಲಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಮತ್ತು ಚೀನಾದ ಸಾರ್ವಜನಿಕ ಭದ್ರತೆ ಸಚಿವ ಝಾವೊ ಕೆಝಿ ನಡುವೆ ನಡೆದ ದ್ವಿಪಕ್ಷೀಯ ಭದ್ರತಾ ಸಹಕಾರ ಸಭೆಯ ವೇಳೆ ಆಂತರಿಕ ಭದ್ರತಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಗಳಿಗೆ ಚೀನಾದ ಬೆಂಬಲದ ಬಗ್ಗೆ ಮಾತನಾಡಿದ ಚೀನಾದ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್, ಇಬ್ಬರು ಸಚಿವರ ನಡುವೆ ನಡೆದ ಮಾತುಕತೆಗಳ ನಿರ್ದಿಷ್ಟ ವಿವರಗಳನ್ನು ತಾನಿನ್ನೂ ಪರಿಶೀಲಿಸಿಲ್ಲ ಎಂದು ಹೇಳಿದರು.





