ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ: ದೇವೇಗೌಡ
"ಮಧು ಬಂಗಾರಪ್ಪ ಗೆಲುವು ಖಚಿತ"

ಶಿವಮೊಗ್ಗ, ಅ. 23: ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ತರಲು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು 2019 ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿಕೂಟ ರಚಿಸಿಕೊಳ್ಳಲಾಗುತ್ತಿದೆ. ಇದು ರಾಜ್ಯದಿಂದಲೇ ಆರಂಭವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯೇ ಇದಕ್ಕೆ ಮುನ್ನುಡಿಯಾಗಿದೆ ಎಂದು ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳೆರೆಡು ಇದೀಗ ಗಟ್ಟಿಯಾಗಿವೆ. ಎಲ್ಲ ವೈಮನಸ್ಸು ಬದಿಗಿಟ್ಟು, ಬಿಜೆಪಿಯನ್ನು ದೂರವಿಡಲು ಪಣ ತೊಟ್ಟಿದ್ದೇವೆ. ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಗೆಲುವು ಖಚಿತವಾಗಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಮಧು ಬಂಗಾರಪ್ಪ ಚುನಾವಣಾ ಕಣಕ್ಕಿಳಿಯಲು ಕಾಗೋಡು ತಿಮ್ಮಪ್ಪ ಪ್ರೇರಣೆಯಾಗಿದ್ದಾರೆ. ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್, ವೇಣುಗೋಪಾಲ್ ಸೇರಿದಂತೆ ಆ ಪಕ್ಷದ ಮುಖಂಡರ ಜೊತೆ ಚರ್ಚಿಸಿಯೇ ಮಧು ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಕೂಡ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಲಿವೆ ಎಂದರು.
ಮಧು ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಸೇರಿದಂತೆ ಆ ಪಕ್ಷದ ಮುಖಂಡರೆಲ್ಲರೂ ಆಗಮಿಸುತ್ತಾರೆ. ಈಗಾಗಲೇ ತಾನು ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿದ್ದೇನೆ. ಎರಡೂ ಪಕ್ಷದ ಮುಖಂಡರ ನಡುವೆ ಯಾವುದೇ ಗೊಂದಲವಿಲ್ಲ. ಈ ಬಾರಿಯೂ ಬಿಜೆಪಿ ಕನಸು ನುಚ್ಚುನೂರಾಗಲಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಏನು ಮಾಡುತ್ತಿದ್ದಾರೆ ಎಂದು ಈಗಾಗಲೇ ರಾಷ್ಟ್ರದ ಜನತೆಗೆ ನಿಧಾನವಾಗಿ ಅರ್ಥವಾಗುತ್ತಿದೆ. ಹರ್ಯಾಣ, ಗುಜರಾತ್, ಕಾಶ್ಮೀರಗಳಲ್ಲಿ ರಾಜಕಾರಣ ಹೇಗೆ ಸಾಗುತ್ತಿದೆ ಎಂಬುವುದು ಗೊತ್ತಾಗುತ್ತದೆ. ದಲಿತರ ಮೇಲಿನ ಹಲ್ಲೆಗಳು ನಿರಂತರವಾಗಿ ಸಾಗಿವೆ. ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ಇದೊಂದು ವಿಫಲ ಸರ್ಕಾರವಾಗಿದೆ. ಈ ಮತೀಯ ಸರ್ಕಾರವನ್ನು ದೂರವಿಡಬೇಕಾಗಿದೆ ಎಂದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಅಭ್ಯರ್ಥಿ ಮಧು ಬಂಗಾರಪ್ಪ, ಎಐಸಿಸಿ ಕಾರ್ಯದರ್ಶಿ ವಿಷ್ಣು, ಪ್ರಮುಖರಾದ ಎಂ.ಶ್ರೀಕಾಂತ್, ತೀ.ನಾ.ಶ್ರೀನಿವಾಸ್, ಮಂಜುನಾಥಗೌಡ ಸೇರಿದಂತೆ ಮೊದಲಾದವರಿದ್ದರು.
ಅಲ್ಪಸಂಖ್ಯಾತರ ರಕ್ಷಣೆ
ಬಿಜೆಪಿಯವರು ಮತೀಯ ರಾಜಕಾರಣದಲ್ಲಿ ತೊಡಗಿದ್ದಾರೆ. ಹಿಂದೂ ಧರ್ಮವನ್ನು ಮೈಮೇಲೆ ಬರಿಸಿಕೊಂಡವರಂತೆ ಮಾತನಾಡುತ್ತಾರೆ. ಅವರಿಗೆ ಶಾಂತಿ, ಸಹಬಾಳ್ವೆ ಮುಖ್ಯವಾಗಿಲ್ಲ. ಈ ದೇಶದಲ್ಲಿ 40 ಕೋಟಿ ಮುಸ್ಲಿಮರು, 20 ಕೋಟಿ ಕ್ರಿಶ್ಚಿಯನ್ನರಿದ್ದಾರೆ. ದಲಿತರು ಸೇರಿದಂತೆ ನಾನಾ ಜಾತಿಗಳಿವೆ. ಇವರಿಗೆ ಅದ್ಯಾವುದೂ ಮುಖ್ಯವಾಗಿಲ್ಲ. ನಾನೂ ಕೂಡ ಹಿಂದೂವಾಗಿದ್ದೇನೆ. ಎಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತರುವುದನ್ನು ಬಿಟ್ಟು ರಾಜಕಾರಣಕ್ಕಾಗಿ ಬಳಸಿಕೊಳ್ಳುವ ಸ್ವಾರ್ಥಿ ಪಕ್ಷ ಬಿಜೆಪಿ ಎಂದು ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.







