ಕುವೆಂಪು ಸಮಕಾಲೀನ ಪ್ರಜ್ಞೆಯಲ್ಲಿ ಬದುಕಿದ ಬಹುದೊಡ್ಡ ಲೇಖಕ: ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ

ಮೈಸೂರು,ಅ.23: ಕುವೆಂಪು ಪರಂಪರೆಯಿಂದ ಕಲಿತು, ಪ್ರಗತಿಪರತೆಯ ಪ್ರಜ್ಞೆಯಲ್ಲಿ ಬೆಳೆದು ಮತ್ತು ಸಮಕಾಲೀನ ಪ್ರಜ್ಞೆಯಲ್ಲಿ ಬದುಕಿದ ಬಹುದೊಡ್ಡ ಲೇಖಕರು ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕುವೆಂಪು ಕಾವ್ಯಾಧ್ಯಯನ ಪೀಠ ಸಹಯೋಗದಲ್ಲಿ ಮಂಗಳವಾರ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ಸಾಹಿತ್ಯ-ಸಾಂಸ್ಕೃತಿಕ ಅನುಸಂಧಾನ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಂಪರೆಯ ಪ್ರಜ್ಞೆ ಮತ್ತು ಪ್ರಗತಿ ಪ್ರಜ್ಞೆ ಇವರೆಡನ್ನು ಮೇಳೈಸಿದ್ದ ಸಮಕಾಲೀನ ಪ್ರಜ್ಞೆಯ ಲೇಖಕ ಕವಿ ಕುವೆಂಪು. ಪರಂಪರೆ ಪ್ರಜ್ಞೆ ಎಂದರೆ ಜಡ ಸಂಪ್ರದಾಯವಲ್ಲ, ಕಲಿಕೆ. ಪ್ರಗತಿ ಪ್ರಜ್ಞೆ ಎಂದರೆ ಬೆಳೆಯುವಿಕೆ, ಸಮಕಾಲೀನ ಪ್ರಜ್ಞೆ ಎಂದರೆ ಬದುಕುವುದು. ಕುವೆಂಪು ಇವುಗಳ ಸಂಗಮವಾಗಿದ್ದರು ಎಂದರು.
ಕುವೆಂಪು ಸಾಹಿತ್ಯ ಕ್ಷೇತ್ರದಲ್ಲಿದ್ದು ಸಾಹಿತ್ಯ ಕ್ಷೇತ್ರವನ್ನು ಮೀರಿದ ಒಂದು ದೊಡ್ಡ ಸಾಂಸ್ಕರತಿಕ ವ್ಯಕ್ತಿತ್ವ. ಸಾಂಸ್ಕೃತಿಕ ವ್ಯಕ್ತಿತ್ವದ ಒಳಗಡೆ ಸಾಮಾಜಿಕ ವ್ಯಕ್ತಿತ್ವ ನಿರಂತರವಾಗಿ ಕೆಲಸ ಮಾಡುತ್ತಿತ್ತು. ಹಾಗಾಗಿ ಸಂಸ್ಕೃತಿ ಮತ್ತು ಸಮಾಜ ಇವರೆಡರ ನಡುವೆ ಒಂದು ಸಂಬಂಧವನ್ನು ಕಲ್ಪಿಸಿದ ಸೃಜನಶೀಲತೆ ಮತ್ತು ಚಿಂತನಶೀಲತೆಯ ಒಟ್ಟೊಟ್ಟಿಗೆ ನಿರ್ವಹಿಸಿದ ಆಧುನಿಕ ಕನ್ನಡ ಸಾಹಿತ್ಯ ಚಿಂತನೆಯ ಶಿಖರ ಕುವೆಂಪು. ನವೋದಯ ಕಾಲದಲ್ಲಿ ಕುವೆಂಪು ಅವರನ್ನು ಕೆಲವರು ರಮ್ಯತೆಯ ಶಿಖರವೆಂದು ಕರೆದಿದ್ದಾರೆ. ಆದರೆ ಕುವೆಂಪು ಆ ಕಾಲದ ಮತ್ತು ಈ ಕಾಲಕ್ಕೂ ಪ್ರಸ್ತುತವಾದ ವೈಚಾರಿಕ ಚಿಂತನೆಯ ಶಿಖರ ಎಂದು ತಿಳಿಸಿದರು.
ಕುವೆಂಪು ಅವರ ಕುರಿತಾದ ವಿಮರ್ಶೆ ಪೂರ್ವಗ್ರಹದಿಂದ ಮುಕ್ತವಾಗಿರಲಿಲ್ಲ. ಜಾತಿಯ ಕಾರಣಕ್ಕಾಗಿ ಅವರು ಮಹಾಕವಿ ಅಲ್ಲ ಎಂದು ಹೇಳುವ ಮಹಾತಂಡವೇ ಇತ್ತು. ಕುರ್ತಿಕೋಟಿ ಅವರು 'ಶ್ರೀರಾಮಾಯಣ ದರ್ಶನಂ'ನಲ್ಲಿ ಮಹಾಕಾವ್ಯದ ಲಕ್ಷಣ ಇಲ್ಲ ಎಂದಿದ್ದರು. ಕುವೆಂಪು ಮಹಾಕವಿ ಅಲ್ಲ, ಮಹಾ ಕಾದಂಬರಿಕಾರ. ಬೇಂದ್ರೆ ಮಹಾಕವಿ ಎಂದವರಿದ್ದಾರೆ. ಈ ಪ್ರಶ್ನೆ ಅಮೆರಿಕದವರೆಗೂ ಹರಿದಿತ್ತು. ಕುವೆಂಪು ಮತ್ತು ಬೇಂದ್ರೆ ಇಬ್ಬರು ಮಹಾಕಾವಿಗಳು. ಕುವೆಂಪು ಮಹಾಕಾವ್ಯ ಬರೆಯದಿದ್ದರೂ ಮಹಾಕವಿಯೇ. ಅಂತೆಯೇ ಬೇಂದ್ರೆ ಕೂಡ ಮಹಾಕವಿ ಎಂದು ಹೇಳಿದರು.
ವಿಮರ್ಶಕ ಪರ ವಿರೋಧದ ನೆಲೆಯಲ್ಲಿ ನಿಂತುಕೊಳ್ಳಬಾರದು. ವಿಮರ್ಶಕ ವಿಷಯವನ್ನು ಅರ್ಥೈಸಿಕೊಂಡು ವ್ಯಾಖ್ಯಾನಿಸಬೇಕು. ಅಗತ್ಯ ಇದ್ದಾಗ ತೀರ್ಪು ಕೊಡಬೇಕು. ವಿಮರ್ಶಕ ವಕೀಲ ಅಲ್ಲ. ಕವಿ ಕಕ್ಷಿದಾರರಲ್ಲ. ಸಹೃದಯ ಸಾಕ್ಷಿದಾರನಲ್ಲ. ಸಾಹಿತ್ಯ ಅನ್ನೋದು ನ್ಯಾಯಾಲಯದ ಅಂಗಳವಲ್ಲ. ಇದನ್ನು ಅರ್ಥಮಾಡಿಕೊಂಡರೆ ಕುವೆಂಪು, ಬೇಂದ್ರೆ, ಅಡಿಗರಿಗೆ ನ್ಯಾಯ ಸಲ್ಲಿಸದಂತೆಯೇ ಎಂದು ನುಡಿದರು.
ಪ್ರಭಾರ ಕುಲಪತಿ ಪ್ರೊ.ಆಯಿಷಾ ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕವಿ ಪ್ರೊ.ರಾಮೇಗೌಡ, ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ಪಿ.ಸಿದ್ಧಾಶ್ರಮ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್, ಜಾನಪದ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಎಂ.ನಂಜಯ್ಯ ಹೊಂಗನೂರು, ಡಾ.ಸಿ.ಕುಮುದ ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳು ಬಡ್ಡಿ ಪೀಠಗಳಾಗಿವೆ. ಅಧ್ಯಯನ ಪೀಠಗಳಿಗೆ ಒಂದಷ್ಟು ಲಕ್ಷವನ್ನು ಇಟ್ಟು ಅದರಿಂದ ಬರುವ ಬಡ್ಡಿಯ ಹಣದಿಂದ ಕೆಲಸ ಮಾಡಿಕೊಂಡು ಹೋಗಲು ವಿವಿ ಹೇಳುತ್ತದೆ. ಇದು ಸರಿಯಲ್ಲ, ಅಧ್ಯಯನ ಪೀಠಗಳನ್ನು ಬಡ್ಡಿಯಿಂದ ಮುಕ್ತಿಗೊಳಿಸಬೇಕಿದೆ.
-ಬರಗೂರು ರಾಮಚಂದ್ರಪ್ಪ, ಸಾಹಿತಿ







