ಮೈಸೂರು: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ
ಮೈಸೂರು,ಅ.23: ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಖಚಿತಪಡಿಸಿಕೊಂಡ ಖದೀಮರು ಬಾಗಿಲು ಮೀಟಿ ಮನೆಯೊಳಗೆ ನುಗ್ಗಿ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ರಾಮಕೃಷ್ಣ ನಗರದ ಮನೆಯೊಂದರಲ್ಲಿ ನಡೆದಿದೆ.
ರಾಮಕೃಷ್ಣ ನಗರದ ಜಿ ಬ್ಲಾಕ್ ನ 18ನೇ ಕ್ರಾಸ್ ನ ಮನೆಯ ಮಾಲಕ ವೈ.ಎಸ್.ಗಣೇಶ್ ಮತ್ತವರ ಪತ್ನಿ ವೀಣಾ ಎಂಬವರು ಅ.16ರಂದು ಮನೆಗೆ ಬೀಗ ಹಾಕಿ ಬೆಂಗಳೂರಿನಲ್ಲಿರುವ ತಮ್ಮ ಪುತ್ರನ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದೇ ಇರುವುದರಿಂದ ದಿನಪತ್ರಿಕೆಗಳು ಮನೆಯ ಗೇಟ್ ಬಳಿಯೇ ಬಿದ್ದಿದ್ದು, ಇದನ್ನು ಗಮನಿಸಿದ ಖದೀಮರು ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಮನೆಯ ಬಾಗಿಲು ಮೀಟಿ ಒಳನುಗ್ಗಿ ಕೋಣೆಯ ಬೀರುವಿನಲ್ಲಿಟ್ಟಿದ್ದ ಐದು ಲಕ್ಷ ರೂ.ಚಿನ್ನಾಭರಣವನ್ನು ಕಳವು ಮಾಡಿದ್ದಾರೆ. ಅದರ ಜತೆಯಲ್ಲಿ 18 ಸಾವಿರ ರೂ.ನಗದು ಕೂಡ ಇದ್ದು ಅದನ್ನು ಕೂಡ ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಅ.20ರಂದು ದಂಪತಿ ಮನೆಗೆ ಮರಳಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





