ಡಿಟಿಸಿ ಬಸ್ ಕ್ಲೀನರ್ ಏಶ್ಯನ್ ಪ್ಯಾರಾ ಗೇಮ್ಸ್ ಚಾಂಪಿಯನ್: ವಿಕಲಚೇತನ ಅಥ್ಲೀಟ್ ನಾರಾಯಣ ಅಸಾಮಾನ್ಯ ಸಾಧನೆ

ಹೊಸದಿಲ್ಲಿ, ಅ.23: ಹುಟ್ಟುವಾಗಲೇ ಅಂಗವೈಕಲ್ಯ ಹೊಂದಿದ್ದ, ಜೀವನದಲ್ಲಿ ಸಾಕಷ್ಟು ಕಷ್ಟ-ಕಾರ್ಪಣ್ಯಗಳನ್ನು ದಾಟಿ ಬಂದಿರುವ ನಾರಾಯಣ ಠಾಕೂರ್ ಅವರು ಜಕಾರ್ತದಲ್ಲಿ ಇತ್ತೀಚೆಗೆ ಕೊನೆಗೊಂಡಿರುವ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ 100 ಮೀ. ಓಟದ ಟಿ-35 ವಿಭಾಗದಲ್ಲಿ ಚಿನ್ನ ಜಯಿಸಿ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಚಿನ್ನ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
27ರ ಹರೆಯದ ಠಾಕೂರ್ ಬಲಭಾಗದ ಹೆಮಿಪಾರಿಸಿಸ್ ಪೀಡಿತರಾಗಿದ್ದಾರೆ. 8ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಠಾಕೂರ್ ಮುಂದಿನ 8 ವರ್ಷಗಳ ಕಾಲ ದಿಲ್ಲಿಯ ಅನಾಥಾಲಯದಲ್ಲಿದ್ದರು. ಜೀವನ ನಿರ್ವಹಣೆಗೆ ರಸ್ತೆ ಬದಿಯ ಡಾಬಾಗಳಲ್ಲಿ ಕೆಲಸ ಮಾಡುತ್ತಾ, ಡಿಟಿಸಿ ಬಸ್‌ಗಳನ್ನು ಸ್ವಚ್ಛಗೊಳಿಸಿದ್ದರು.
ಮೂಲತಃ ಬಿಹಾರದವರಾದ ಠಾಕೂರ್ ಅವರು ತಂದೆ ತೀರಿಕೊಂಡ ಬಳಿಕ ದಿಲ್ಲಿಗೆ ಆಗಮಿಸಿದ್ದರು. ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ ತೀರಿಕೊಂಡ ನಂತರ ಠಾಕೂರ್ ತಾಯಿಗೆ ಮೂವರು ಮಕ್ಕಳನ್ನು ಸಾಕುವುದು ಕಷ್ಟವಾಯಿತು. ಹಾಗಾಗಿ ಠಾಕೂರ್‌ರನ್ನು ದಿಲ್ಲಿಯ ದರಿಯಗಂಜ್‌ನಲ್ಲಿರುವ ಅನಾಥಾಲಯಕ್ಕೆ ಸೇರಿಸಿದರು. ಅಲ್ಲಿ ಅವರಿಗೆ ಸೇವಿಸಲು ಆಹಾರ ಹಾಗೂ ಕಲಿಯಲು ವಿದ್ಯೆ ಲಭಿಸಿತ್ತು. ‘‘ನನಗೆ ಕ್ರೀಡೆ ಮೇಲೆ ತುಂಬಾ ಪ್ರೀತಿಯಿತ್ತು. ಕ್ರಿಕೆಟ್ ಆಡಬೇಕೆಂಬ ಬಯಕೆ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಅನಾಥಾಲಯವನ್ನು ಬಿಟ್ಟುಬಂದ ನಂತರ ಇತರ ಕ್ರೀಡೆಗಳತ್ತ ಗಮನ ಹರಿಸಿದೆ. ನಾನು 2010ರಲ್ಲಿ ಅನಾಥಾಶ್ರಮ ತೊರೆದ ಬಳಿಕ ನನ್ನ ಕುಟುಂಬ ವಾಸಿಸುತ್ತಿದ್ದ ಗುಡಿಸಲನ್ನು ಧ್ವಂಸಗೊಳಿಸಲಾಗಿತ್ತು. ಆಗ ನಾವು ಬೇರೆ ದಾರಿಯಿಲ್ಲದೆ ಹತ್ತಿರದ ಮತ್ತೊಂದು ಪ್ರದೇಶಕ್ಕೆ ಹೋದೆವು. ನಾವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೆವು. ಜೀವನ ನಿರ್ವಹಣೆಗೆ ನಾನು ದಿಲ್ಲಿ ಸರಕಾರಿ ಬಸ್‌ನ್ನು ಸ್ವಚ್ಛಗೊಳಿಸುತ್ತಿದ್ದೆ. ರಸ್ತೆಬದಿಯ ಸ್ಟಾಲ್‌ಗಳಲ್ಲಿ ವೈಟರ್ ಆಗಿ ಕೆಲಸ ಮಾಡಿದ್ದೆ. ಆದರೆ, ನನಗೆ ಕ್ರೀಡೆ ಮೇಲಿನ ವ್ಯಾಮೋಹ ಕಡಿಮೆಯಾಗಲಿಲ್ಲ’’ ಎಂದು ಠಾಕೂರ್ ಹೇಳಿದ್ದಾರೆ.
‘‘ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಓರ್ವರು ನೀಡಿದ ಸಲಹೆ ಮೇರೆಗೆ ಅಥ್ಲೀಟ್ ಆಗಿ ಬದಲಾದೆ. ತಾನು ಈ ಹಂತಕ್ಕೆ ಬರಲು ಸಾಕಷ್ಟು ಶ್ರಮಪಟ್ಟಿದ್ದೆ. ತನ್ನ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದೆ. ಹೀಗಾಗಿ ನಾನು ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದೆ’’ ಎಂದು ಠಾಕೂರ್ ತಿಳಿಸಿದರು. ‘‘ಜಕಾರ್ತದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಏಶ್ಯಡ್ ಹಾಗೂ ಏಶ್ಯ ಪ್ಯಾರಾ ಗೇಮ್ಸ್ ನಲ್ಲಿ 100 ಮೀ. ಓಟದಲ್ಲಿ ಚಿನ್ನ ಗೆದ್ದ ಭಾರತದ ಏಕೈಕ ಅಥ್ಲೀಟ್ ಎನಿಸಿಕೊಂಡಿದ್ದಕ್ಕೆ ಖುಷಿಯಾಗುತ್ತಿದೆ’’ ಎಂದು ಠಾಕೂರ್ ಹೇಳಿದ್ದಾರೆ.
ಪ್ಯಾರಾ ಗೇಮ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಠಾಕೂರ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಸನ್ಮಾನಿಸಿ, 40 ಲಕ್ಷ ರೂ. ಚೆಕ್ ನೀಡಿದ್ದಾರೆ. ದಿಲ್ಲಿ ಸರಕಾರದಿಂದಲೂ ಹಣಕಾಸು ನೆರವಿನ ನಿರೀಕ್ಷೆಯಲ್ಲಿರುವ ಠಾಕೂರ್‌ಗೆ ಸರಿಯಾದ ಉದ್ಯೋಗವಿಲ್ಲ. ಠಾಕೂರ್ ತಾಯಿ ಪಾನ್ ಶಾಪ್ ನಡೆಸುತ್ತಿದ್ದು, ಠಾಕೂರ್ ತನ್ನ ತಾಯಿಗೆ ನೆರವಾಗುತ್ತಿದ್ದಾರೆ. ಇನ್ನು ಮುಂದೆ ತನ್ನ ಜೀವನ ಬದಲಾಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ.







