ಟಿಕೆಟ್ ದರ ಏರಿಕೆಗೆ ಕಡಿವಾಣವಿರಲಿ
ಮಾನ್ಯರೇ,
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಲಕ್ಷಾಂತರ ಬಡ ಕೂಲಿ ಕಾರ್ಮಿಕರು ದುಡಿಯಲು ಗುಳೆ ಹೋಗಿದ್ದಾರೆ. ಅಲ್ಲದೆ ಸಾವಿರಾರು ಜನರು ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಬೆಂಗಳೂರಿಗೆ ಪ್ರತಿ ದಿನವೂ ಬರುತ್ತಿರುತ್ತಾರೆ. ಅಕ್ಷರಸ್ಥರು ಮುಂಚಿತವಾಗಿ ಸರಕಾರಿ ಬಸ್ ಮತ್ತು ರೈಲುಗಳಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ಮುಂಗಡ ಕಾದಿರಿಸುತ್ತಾರೆ. ಹೀಗಾಗಿ ಗ್ರಾಮೀಣ ಭಾಗದ ಅನಕ್ಷರಸ್ಥ ಕೂಲಿ ಕಾರ್ಮಿಕರಿಗೆ ಸರಕಾರಿ ಬಸ್ಸುಗಳಲ್ಲಿ ಟಿಕೆಟ್ ಸಿಗುವುದಿಲ್ಲ. ಈ ಕಾರಣದಿಂದ ಬಡವರು ಖಾಸಗಿ ಬಸ್‌ಗಳತ್ತ ತೆರಳಬೇಕಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ಸಿನವರು ತಮ್ಮ ಮನಸ್ಸಿಗೆ ಬಂದಂತೆ ಟಿಕೆಟ್ ದರ ಏರಿಕೆ ಮಾಡುತ್ತಿದ್ದಾರೆ.
ಬೆಂಗಳೂರಿನಿಂದ ವಿಜಯಪುರಕ್ಕೆ ಬರಲು ಟಿಕೆಟ್ ದರ 500 ರೂ. ಇದೆ. ಆದರೆ ಶನಿವಾರ ಮತ್ತು ರವಿವಾರ ಇಲ್ಲವೇ ಸಾಲು ಸಾಲು ರಜೆ ಬಂದರೆ ಅಥವಾ ಹಬ್ಬ ಹರಿದಿನಗಳು ಬಂದರೆ ಖಾಸಗಿ ಬಸ್‌ನವರು 1,000ರಿಂದ 2,000 ರೂ. ವರೆಗೂ ಟಿಕೆಟ್ ದರ ಏರಿಕೆ ಮಾಡಿ ಬಿಡುತ್ತಾರೆ. ಇದರಿಂದ ಬಡ ಜನರು ಹಬ್ಬ ಹರಿದಿನಗಳಿಗೆ ತಮ್ಮ ಊರಿಗೆ ಹೋಗಬೇಕಾದರೆ ಸಾವಿರಾರು ರೂ. ನೀಡಬೇಕಾಗುತ್ತದೆ. ಹೀಗಾಗಿ ಅವರು ಹಬ್ಬಗಳಿಗೆ ಹಾಗೂ ಇನ್ನಿತರ ಶುಭ ಕಾರ್ಯಗಳಿಗೆ ಹೋಗಲು ಆಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಬಸ್ಸುಗಳ ದುಪ್ಪಟ್ಟು ದರ ಏರಿಕೆ ನಿಲ್ಲಿಸುವಂತೆ ಕಾನೂನು ರೂಪಿಸಬೇಕು. ಎಲ್ಲಾ ಸಮಯದಲ್ಲೂ ಒಂದೇ ರೀತಿಯ ದರ ತೆಗೆದುಕೊಳ್ಳುವಂತೆ ಮಾಡಬೇಕು. ಜೊತೆಗೆ ಸರಕಾರಿ ಬಸ್ಸುಗಳ ಸಂಖ್ಯೆ ಹೆಚ್ಚಿಸಬೇಕು.







