ಅನಿವಾಸಿ ಕನ್ನಡಿಗರ ಸಮಸ್ಯೆ ಪರಿಹರಿಸಲು ಅನಿವಾಸಿ ಭಾರತೀಯ ಫೋರಂ ಉಪಾಧ್ಯಕ್ಷ ತನ್ವೀರ್ ಅಹ್ಮದ್ ಶ್ರಮಿಸಲಿ: ಐಎಸ್‌ಎಫ್

ಸೌದಿ ಅರೇಬಿಯ, ಅ.24: ಅನಿವಾಸಿ ಭಾರತೀಯ ಫೋರಂ ಕರ್ನಾಟಕ ಇದರ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ತನ್ವೀರ್ ಅಹ್ಮದ್‌ರನ್ನು ಇಂಡಿಯನ್ ಸೋಶಿಯಲ್ ಫೋರಂ(ಐಎಸ್‌ಎಫ್)ನ ಸೌದಿ ಅರಬಿಯಾ ಪೂರ್ವ ಪ್ರಾಂತ್ಯ ಅಭಿನಂದಿಸಿದೆ. ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಲಿ ಎಂದು ಐಎಸ್‌ಎಫ್ ಆಶಿಸಿದೆ.
ಸೌದಿ ಅರೇಬಿಯಾದಾದ್ಯಂತ ಇರುವ ಸಂಪರ್ಕವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಕರ್ನಾಟಕ ಸರ್ಕಾರ ಮತ್ತು ಚದುರಿ ಹೋಗಿರುವ ಅನಿವಾಸಿ ಕನ್ನಡಿಗರ ನಡುವೆ ಸಂಪರ್ಕ ಸಾಧಿಸುವಲ್ಲಿ ಅವರು ಯಶಸ್ಸು ಸಾಧಿಸಲಿ. ಅದೇ ರೀತಿ ವಿವಿಧ ಸಾಮಾಜಿಕ ಸಂಘಟನೆಗಳು ಈಗಾಗಲೇ ಸಲ್ಲಿಸಿರುವ ಅಧ್ಯಯನಗಳು ಮತ್ತು ಶಿಫಾರಸುಗಳನ್ನು ಪರಿಗಣಿಸಿ ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಮುತುವರ್ಜಿ ವಹಿಸಲಿ ಎಂದು ಇಂಡಿಯನ್ ಸೋಶಿಯಲ್ ಫೋರಂ ಪೂರ್ವ ಪ್ರಾಂತ್ಯ ಸೌದಿ ಅರೇಬಿಯಾದ ರಾಜ್ಯಾಧ್ಯಕ್ಷ ಮುಹಮ್ಮದ್ ಶರೀಫ್ ಒತ್ತಾಯಿಸಿದರು.
ಸೌದಿ ಅರೇಬಿಯಾದಲ್ಲಿ ಕರ್ನಾಟಕದ ಸಂಸ್ಕೃತಿ ಮತ್ತು ಕಲೆಗಳನ್ನು ಉತ್ತೇಜಿಸುವಲ್ಲಿ ಅನಿವಾಸಿ ಭಾರತೀಯ ಫೋರಂಗೆ ಇಂಡಿಯನ್ ಸೋಶಿಯಲ್ ಫೋರಂ ಸಂಪೂರ್ಣ ಬೆಂಬಲವಾಗಿರಲಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.





