ರಾಮನನ್ನು ಜಪಿಸುವ ಬಿಜೆಪಿ, ವಾಲ್ಮೀಕಿ ಸಮುದಾಯವನ್ನು ಮರೆತಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಅ. 24: ‘ರಾಮನನ್ನು ಜಪಿಸುವ ಬಿಜೆಪಿ ಮುಖಂಡರು, ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಹಾಗೂ ವಾಲ್ಮೀಕಿ ಸಮುದಾಯವನ್ನು ಮರೆತಿದ್ದಾರೆ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪರಿಶಿಷ್ಟ ವರ್ಗಗಗಳ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ ಸಂದೇಶ, ಸಾಮಾಜಿಕ ಮೌಲ್ಯಗಳು, ಜನಪ್ರತಿನಿಧಿಗಳು ಹೇಗಿರಬೇಕೆಂಬ ಮಾರ್ಗಸೂಚಿಗಳು ರಾಮಾಯಣದಲ್ಲಿವೆ. ಆ ಮಾರ್ಗಸೂಚಿಗಳನ್ನು ಪೂರ್ಣಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ವಾಲ್ಮೀಕಿಯವರ ತತ್ವ-ಸಂದೇಶಗಳನ್ನು ಅಳವಡಿಸಿಕೊಳ್ಳಲು ಇಚ್ಛಾಶಕ್ತಿ ಕೊರತೆ ಇದೆ ಎಂದು ನುಡಿದರು.
ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯದ ಸ್ಪೂರ್ತಿಯಿಂದ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಜನಪರ ಆಡಳಿತ ನೀಡುತ್ತಿದೆ ಎಂದ ಅವರು, ಸಮಾಜದಲ್ಲಿ ಆರ್ಥಿಕ ಸಮಾನತೆ ತರಲು ಹಾಗೂ ನವ ಕರ್ನಾಟಕ ನಿರ್ಮಾಣಕ್ಕೆ ಸರಕಾರ ನುಡಿದಂತೆ ನಡೆಯುತ್ತಿದ್ದು, ಕೊಟ್ಟಮಾತಿನಂತೆ ರೈತರ ಸಾಲಮನ್ನಾ ಮಾಡಿದೆ ಎಂದು ಹೇಳಿದರು.
ಮಾನವೀಯತೆ ಮರೆತು ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದ ಅವರು, ಸಮಾಜದ ಎಲ್ಲ ವರ್ಗದ ಜನರನ್ನು ಮುಖ್ಯವಾಹಿನಿಗೆ ತರುವುದು ಸರಕಾರದ ಪ್ರಮುಖ ಉದ್ದೇಶ. ಅಲ್ಲದೆ, ದುಡಿಯುವ ಕೈಗಳನ್ನು ಬಲಪಡಿಸಲು ನಮ್ಮ ಸರಕಾರದ ಧ್ಯೇಯ ಎಂದು ತಿಳಿಸಿದರು.
ಜಾತಿಗೆ ಸೀಮಿತ ಸಲ್ಲ: ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸ, ಅಂಬೇಡ್ಕರ್ ಅವರಂತಹ ದಾರ್ಶನಿಕರನ್ನು ಯಾವುದೇ ಒಂದು ಜಾತಿ-ಸಮಾಜಕ್ಕೆ ಸೀಮಿತಗೊಳಿಸಲಾಗಿರುವುದರಿಂದ ಇತಿಹಾಸದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದರು.
ಪ್ರಶಸ್ತಿಗೆ ಸೂಕ್ತ ಆಯ್ಕೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಲ್ಮೀಕಿ ಸಮುದಾಯಕ್ಕೆ ಎಲ್ಲ ರೀತಿಯ ನೆರವು, ಸಹಕಾರ ನೀಡುವ ಮೂಲಕ ಈ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅದನ್ನು ಪರಿಗಣಿಸಿ ಪ್ರಶಸ್ತಿ ಆಯ್ಕೆ ಸಮಿತಿ ಈ ಬಾರಿಯ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ರಾಜ್ಯದಲ್ಲಿರುವ ನಾಯಕ, ವಾಲ್ಮೀಕಿ ಜನಾಂಗವನ್ನು ಪರಿಶಿಷ್ಟ ಪಂಗಡದ (ಎಸ್ಟಿ) ಪಟ್ಟಿಗೆ ಸೇರ್ಪಡೆಗೊಳಿಸುವಲ್ಲಿ ಹಾಗೂ ವಾಲ್ಮೀಕಿ ಸಮುದಾಯಕ್ಕೆ ಗುರುಪೀಠ ಸ್ಥಾಪಿಸಲು ಆರ್ಥಿಕ ನೆರವು ನೀಡಿದ ಹಿನ್ನೆಲೆಯಲ್ಲಿ ಅವರ ಕೊಡುಗೆಯನ್ನು ಪರಿಗಣಿಸಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಸಮಿತಿ ಆಯ್ಕೆ ಮಾಡಿ ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದರು.
ನ್ಯಾಯವೇ ರಾಮರಾಜ್ಯ: ‘ಜಗತ್ತಿನ ಎಲ್ಲ ಜೀವರಾಶಿಗಳಿಗೆ ನ್ಯಾಯ ಒದಗಿಸುವ ಕೆಲಸ ಆದಲ್ಲಿ ನಮ್ಮದು ರಾಮರಾಜ್ಯವಾಗುತ್ತದೆ. ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿದ್ದು, ಆ ಪೈಕಿ ಪುಸ್ತಕಗಳಿಂದ ಆದ ಕ್ರಾಂತಿಗಳೇ ಹೆಚ್ಚು’ ಎಂದು ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.
ಕೃತಿಗಳಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯ, ರಾಮಾಯಣವು ಒಂದು ಎಂದ ಅವರು, ಪ್ರಶಸ್ತಿಗಳನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸದೆ, ಬೇರೆ ಸಮಾಜದವರು ಇತರೆ ಸಮುದಾಯಗಳಿಗೆ ನೀಡಿರುವ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿದರೆ ಒಳ್ಳೆಯದು. ಹೀಗಾಗಿ ಈ ಬಾರಿಯ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿ ಮಾತನಾಡಿ, ಎಸ್ಸಿ-ಎಸ್ಟಿ ವರ್ಗದ ನೌಕರರ ಮುಂಭಡ್ತಿ ಮೀಸಲಾತಿ ಸಂಬಂಧಿಸಿದ ಕಾಯ್ದೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಬುಡಕಟ್ಟು ವಿವಿ ಸ್ಥಾಪಿಸಲು ಸರಕಾರ ಮುಂದಾಗಬೇಕು. ಅಲ್ಲದೆ, ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯವನ್ನು ಪ್ರಾರಂಭಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕರ ಭವನದ ಆವರಣದಲ್ಲಿನ ತಪೋವನದಲ್ಲಿರುವ ವಾಲ್ಮೀಕಿ ಪುತ್ಥಳಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಪ್ರಸನ್ನಾನಂದಪುರಿ ಸ್ವಾಮೀಜಿ ಸೇರಿದಂತೆ ಸಮಾಜದ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಮೇಯರ್ ಗಂಗಾಂಬಿಕೆ, ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ಪಾಲಿಕೆ ಸದಸ್ಯರಾದ ನರಸಿಂಹ ನಾಯಕ್, ನೇತ್ರಾ ಪಲ್ಲವಿ, ಈ. ವೆಂಕಟಯ್ಯ, ನಿರ್ದೇಶಕ ಸಂಗಪ್ಪ, ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಉಪಸ್ಥಿತರಿದ್ದರು.
ಸಿಎಂ ಗೈರಿಗೆ ಆಕ್ಷೇಪ
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಗೈರಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಮಾಜದ ಕೆಲ ಯುವಕರು, ಎಚ್‌ಡಿಕೆ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಬ್ಯಾಂಕ್ವೆಟ್ ಹಾಲ್‌ನಿಂದ ಹೊರ ಬಂದ ಸಚಿವ ಪ್ರಿಯಾಂಕ್ ಖರ್ಗೆಗೆ ಮುತ್ತಿಗೆ ಹಾಕಿ, ವಾಲ್ಮೀಕಿ ಜಯಂತಿಯನ್ನು ಸಿಎಂ ನಿರ್ಲಕ್ಷಿಸಿದ್ದು ಸಲ್ಲ ಎಂದು ಆಕ್ಷೇಪಿಸಿದರು. ಈ ವೇಳೆ ಪ್ರಿಯಾಂಕ್, ಯುವಕರನ್ನು ಸಮಾಧಾನಪಡಿಸಿದರು.
ಪ್ರಶಸ್ತಿ ಪ್ರದಾನ ಮುಂದೂಡಿಕೆ
‘ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ವಿದೇಶ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಂದು(ಅ.24) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿಲ್ಲ. ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’
-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ







