ಶಿವಮೊಗ್ಗ: ಸೂಕ್ತ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ. ವಶ

ಶಿವಮೊಗ್ಗ, ಅ. 24: ಸೂಕ್ತ ದಾಖಲೆಯಿಲ್ಲದೆ ಕಾರಿನಲ್ಲಿ ಕೊಂಡೊಯ್ಯುತ್ತಿದ್ದ 30 ಲಕ್ಷ ರೂ.ಗಳನ್ನು ವಶಕ್ಕೆ ಪಡೆದಿರುವ ಘಟನೆ ಶಿವಮೊಗ್ಗ ತಾಲೂಕಿನ ಮಡಿಕೆಚೀಲೂರು ಗ್ರಾಮದ ಚೆಕ್‍ಪೋಸ್ಟ್ ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಈ ಕಾರು ಹೊನ್ನಾಳ್ಳಿಯಿಂದ ಶಿವಮೊಗ್ಗದೆಡೆಗೆ ತೆರಳುತ್ತಿತ್ತು. ಶ್ರೀನಿವಾಸ್ ಎಂಬವರಿಗೆ ಈ ಹಣ ಸೇರಿದ್ದಾಗಿದೆ. ಚೆಕ್‍ಪೋಸ್ಟ್ ನಲ್ಲಿ ಚುನಾವಣಾ ಮಾದರಿ ನೀತಿ-ಸಂಹಿತೆ ತಂಡವು ಪ್ರತಿಯೊಂದು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ, ಕಾರಿನಲ್ಲಿ ಲಕ್ಷಾಂತರ ರೂ. ಪತ್ತೆಯಾಗಿದೆ.
ಅಡಕೆ ವಹಿವಾಟಿನಿಂದ ಬಂದ ಹಣವಾಗಿದೆ ಎಂದು ಶ್ರೀನಿವಾಸ್‍ರವರು ಹೇಳಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸಿಲ್ಲ. ಈ ಕಾರಣದಿಂದ ಹಣವನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ. ಪೊಲೀಸರ ತನಿಖೆಯ ನಂತರ ಇನ್ನಷ್ಟೆ ಹೆಚ್ಚಿನ ವಿವರ ಲಭ್ಯವಾಗಬೇಕಾಗಿದೆ.
ಇದೇ ಮೊದಲು: ಲೋಕಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ, ಮಡಿಕೆ ಚೀಲೂರು ಗ್ರಾಮ ಸೇರಿದಂತೆ ಕ್ಷೇತ್ರದ ವಿವಿಧೆಡೆ ಚೆಕ್‍ಪೋಸ್ಟ್ ಗಳನ್ನು ತೆರೆಯಲಾಗಿದೆ. ಉಪ ಚುನಾವಣೆ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಮೊತ್ತದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.







