ವಾಲ್ಮೀಕಿ ಕವಿ ಶ್ರೇಷ್ಠ ಚಿಂತಕ, ದಾರ್ಶನಿಕ: ಶಿವಾನಂದ ಕಾಪಶಿ

ಉಡುಪಿ, ಅ.24: ವಾಲ್ಮೀಕಿ ಮಹಾಕವಿ ಶ್ರೇಷ್ಠ ಚಿಂತಕ, ದಾರ್ಶನಿಕ ಮತ್ತು ತತ್ವಜ್ಞಾನಿಯಾಗಿದ್ದರು. ಅವರ ರಚನೆಯ ರಾಮಾಯಣ ಕೃತಿಯನ್ನು ಪ್ರತಿ ಭಾರತೀಯರು ತಮ್ಮ ಜೀವನದ ಆದರ್ಶವನ್ನಾಗಿ ಪಾಲಿಸುತಿದ್ದಾರೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.
ಬುಧವಾರ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ, ಜಿಲ್ಲಾಡಳಿತ, ಉಡುಪಿ ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆಯ ಸಹಯೋಗದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಹರ್ಷಿ ವಾಲ್ಮೀಕಿ, ಶ್ರೀರಾಮನಂತಹ ಆದರ್ಶ ವ್ಯಕ್ತಿಯನ್ನು ಸೃಷ್ಠಿಸಿದವರು. ಶ್ರೀರಾಮನ ಆದರ್ಶಗಳನ್ನು ಪ್ರತಿ ಭಾರತೀಯರೂ ಆರಾಧಿಸುತ್ತಾರೆ. ಭಾರತದ ಸ್ವಾತಂತ್ರ ಹೋರಾಟಗಾರರು, ಮಹಾತ್ಮ ಗಾಂಧೀಜಿ, ವಿವೇಕಾನಂದರು ಸಹ ಶ್ರೀರಾಮನ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು ಎಂದರು.
ಸಾಮಾನ್ಯ ಡಕಾಯಿತನಾಗಿದ್ದ ವಾಲ್ಮೀಕಿ, ಮನಪರಿವರ್ತನೆಯ ಬಳಿಕ ಮಹಾಕವಿಯಾಗಿ ಮಹಾಕಾವ್ಯ ರಚಿಸಿರುವುದು, ವ್ಯಕ್ತಿಯೊಬ್ಬನನ್ನು ಅತನ ಹಿನ್ನೆಲೆಯಿಂದ ಗುರುತಿಸದೇ ಆತನ ಪ್ರತಿಭೆಯಿಂದ ಗುರುತಿಸಬೇಕು ಎನ್ನುವುದಕ್ಕೆ ನಿದರ್ಶನ. ಪ್ರತಿಯೊಬ್ಬರಲ್ಲೂ ಸುಪ್ತ ಪ್ರತಿಭೆ ಇರುತ್ತದೆ, ಅವರಿಗೆ ಸೂಕ್ತ ಅವಕಾಶ ನೀಡಿ, ಅದನ್ನು ಹೊರತರಲು ಪ್ರಯತ್ನಿಸಬೇಕು ಎಂದು ಕಾಪಶಿ ಹೇಳಿದರು.
ಮಹರ್ಷಿ ವಾಲ್ಮೀಕಿ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ವಡೇರಹೋಬಳಿ ಸರೋಜಿನಿ ಮಧುಸೂಧನ ಕುಶೆ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೆಟ್ಟಿ ಮಾತನಾಡಿ, ವಿಶ್ವದ ಅನೇಕ ರಾಷ್ಟ್ರಗಳು ಮಹಾಕಾವ್ಯವನ್ನು ಹೊಂದಿದ್ದರೂ ಅದು ಜನಮಾನಸದಲ್ಲಿ ಉಳಿದಿಲ್ಲ. ಆದರೆ ಭಾರತದ ರಾಮಾಯಣ, ಮಹಾಭಾರತಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಮನುಷ್ಯನನ್ನು ಕೊಲ್ಲುವ ಡಕಾಯಿತನಾಗಿದ್ದ ವಾಲ್ಮೀಕಿ ಕವಿ, ಮನ ಪರಿವರ್ತನೆ ಹೊಂದಿ ಮಹಾಕವಿಯಾಗಿದ್ದು ಆತನ ಆತ್ಮಶಕ್ತಿಯಿಂದ. ಪ್ರತಿಯೊಬ್ಬರಲ್ಲೂ ಆತ್ಮ ಶಕ್ತಿ ಇದೆ. ಅಸಾಧ್ಯವಾದುದು ಯಾವುದೂ ಇಲ್ಲ, ಆತ್ಮಶಕ್ತಿಯಿಂದ ಎಲ್ಲವೂ ಸಾಧ್ಯವಾಗಲಿದೆ. ಬದುಕಿನಲ್ಲಿ ದಿಟ್ಟ ನಿರ್ಣಯ ಕೈಗೂಂಡು, ಉತ್ತಮ ದಾರಿಯಲ್ಲಿ ನಡೆಯಲು ವಾಲ್ಮೀಕಿ ಕವಿಯ ಬದುಕು ಉತ್ತಮ ಸಂದೇಶ. ವಿದ್ಯಾರ್ಥಿಗಳು ಸತ್ಯ, ಅಸತ್ಯದ ಕುರಿತು ಅರಿವು ಬೆಳಸಿಕೊಂಡು ಸರಿಯಾದ ಮಾರ್ಗದಲ್ಲಿ ಮುನ್ನಡೆಯಬೇಕು, ಇದಕ್ಕೆ ಮಹಷಿ ವಾಲ್ಮೀಕಿಯ ಜೀವ ಸ್ಪೂರ್ತಿಯಾಗಲಿ ಎಂದು ಹೇಳಿದರು.
ಎಎಸ್ಪಿ ಕುಮಾರಚಂದ್ರ, ನಗರಸಭೆ ಆಯುಕ್ತಜನಾರ್ಧನ್ ಉಪಸ್ಥಿತರಿದ್ದರು. ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಲಲಿತಾಬಾಯಿ ಸ್ವಾಗತಿಸಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ವಂದಿಸಿದರು.
ಪರಿಶಿಷ್ಟ ವರ್ಗದ ಕಲಾತಂಡಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.







