ಕರಾವಳಿಯಲ್ಲಿ ನಡೆಯುತ್ತಿರುವ ಕೋಮುವಾದದಿಂದ ಸಮುದಾಯಗಳು ವಿಭಜನೆ: ಭೂಪೇಂದ್ರ ರಾವತ್
ಸಂವಿಧಾನ ಸನ್ಮಾನ ಯಾತ್ರೆಗೆ ಭಟ್ಕಳದಲ್ಲಿ ಆದ್ದೂರಿ ಸ್ವಾಗತ

ಭಟ್ಕಳ, ಅ. 24: ಪ್ರಜಾಪ್ರಭುತ್ವ, ಜಾತ್ಯಾತೀತತೆ, ವೈವಿದ್ಯತೆ, ಸಮಾನತೆ ಮತ್ತು ನ್ಯಾಯಕ್ಕಾಗಿ ದ್ವೇಷ, ಅಸಮಾನತೆ, ಹಿಂಸೆ ಮತ್ತು ಲೂಟಿಯ ವಿರುದ್ಧ ಜನಾಂದೋಲನಗಳ ರಾಷ್ಟ್ರೀಯ ಸಮನ್ವಯ ಸಮಿತಿಯಿಂದ ಗುಜರಾತ್ ನ ದಂಡಿಯಿಂದ ಅ. 2ರಿಂದ ಆರಂಭಗೊಂಡಿರುವ ಸಂವಿಧಾನ ಸನ್ಮಾನ ಯಾತ್ರೆಯನ್ನು ಭಟ್ಕಳದ ವಿವಿಧ ಸಂಘಟನೆಗಳ ಮೂಲಕ ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ಆದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದೆಹಲಿಯ ಜನಸಂಘರ್ಷ ವಾಹಿನಿಯ ಭೂಪೇಂದ್ರ ಸಿಂಗ್ ರಾವತ್, ದೇಶದಾದ್ಯಂತ ಸಂವಿಧಾನಿಕ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿದ್ದು ಕರ್ನಾಟಕದಲ್ಲೂ ಅದು ಮುಂದುವರೆದಿದೆ. ರಾಜ್ಯದ ಕರಾವಳಿಯಲ್ಲಿ ನಡಯುತ್ತಿರುವ ಕೋಮುವಾದಿಕರಣವು ಸಮುದಾಯಗಳನ್ನು ಆಳವಾಗಿ ವಿಭಾಜಿಸುತ್ತಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಕರಾವಳಿ ಪ್ರದೇಶದಲ್ಲಿನ ಕೋಮು ಶಕ್ತಿಗಳು ವಿಭಿನ್ನ ಸಮುದಾಯಗಳನ್ನು ಬೆರೆಯಲು ಬಿಡುತ್ತಿಲ್ಲ. ಇಲ್ಲಿನ ಮುಸ್ಲಿಮರ ಹಾಗೂ ದಲಿತ ಸ್ಥಿತಿ ದಯನೀಯವಾಗಿದೆ. ಜಾತಿಯ ಹೆಸರಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ದಲಿತ ಬಹುಜನರ ಮೇಲೆ ಗೋಮಾಂಸದ ಹೆಸರಲ್ಲಿ ನಡೆಯುತ್ತಿರುವ ಹಲ್ಲೆಗಳು ದೇಶದಲ್ಲಿ ತಲ್ಲಣವನ್ನುಂಟು ಮಾಡಿವೆ ಎಂದರು.
ಕರ್ನಾಟಕದಲ್ಲಿ ನವ ಉದಾರವಾದಿ ಮಾದರಿಯ ಅಭಿವೃದ್ಧಿಗೆ ಯಾವುದೇ ಕಡಿವಾಣವಿಲ್ಲದೇ ವೇಗದಲ್ಲಿ ಸಾಗುತ್ತಿದೆ. ಗ್ರಾಮೀಣ ಜನತೆಗೆ ಘನತೆಯ ಜೀವನ ಖಾತ್ರಿಯಾಗುತ್ತಿಲ್ಲ. ಮೂರು ವರ್ಷಗಳ ಹಿಂದೆ ಕಲ್ಬುರ್ಗಿಯವರ ಹಾಗೂ ಕಳೆದ ಒಂದು ವರ್ಷದ ಹಿಂದೆ ಗೌರಿ ಲಂಕೇಶರ ಹತ್ಯೆಯ ತನಿಖೆಯಲ್ಲಿ ಕೆಲವು ಪ್ರಗತಿಗಳ ಹೊಒರತಾಗಿಯೇ ಇದುವರೆಗೂ ಕೊಲೆಗಾರರನ್ನು ಬಂಧಿಸಲಾಗಿಲ್ಲ. ಗೌರಿ ಹತ್ಯೆ ನಂತರ ಹಲವಾರು ಹಿರಿಯ ಕಾರ್ಯಕರ್ತರು ಟಿ.ವಿ. ಸಂದರ್ಶನ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆದರುತ್ತಿದ್ದಾರೆ. ಇದನ್ನು ಮನಗಂಡ ಜನಾಂದೋಲನಗಳ ರಾಷ್ಟ್ರೀಯ ಸಮನ್ವಯವು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಮತ್ತು ಮೌಲ್ಯಗಳನ್ನು ಪುನಃಸ್ಥಾಪಿಸಲು ರಾಷ್ಟ್ರವ್ಯಾಪಿ ಪ್ರವಾಸ ಸಂವಿಧಾನ ಸನ್ಮಾನ ಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಅ.2ರಂದು ಗುಜರಾತ್ ನ ದಂಡಿಯಿಂದ ಆರಂಭಗೊಂಡ ಈ ಯಾತ್ರೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವಾದ ಡಿಸೆಂಬರ್ 10 ರಂದು ದಿಲ್ಲಿಯಲ್ಲಿ ‘ಜನ ಸಂಸದ್’ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಯಾತ್ರೆಯ ಮೂಲಕ ಹಿಂಸೆ ಮತ್ತು ದ್ವೇಷಕ್ಕ ಬಲಿಯಾದವರೊಟ್ಟಿಗೆ ದುಃಖವನ್ನು ಹಂಚಿಕೊಳ್ಳುವುದು, ಬಹುತ್ವ, ಪ್ರೀತಿ ಮತ್ತು ಶಾಂತಿಯ ಸಂದಶವನ್ನು ಹರಡುತ್ತ ಪ್ರಯಾಣವನ್ನು ಮುಂದುವರೆಸುತ್ತಿದ್ದು ನ.25ರಂದು ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುವುದು ಎಂದರು.
ತಂಝೀಮ ಉಪಾಧ್ಯಕ್ಷ ಹಾಗೂ ಜೆ.ಡಿ.ಎಸ್. ತಾಲೂಕಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಜಾಥಾದಲ್ಲಿ ಭಾಗವಹಿಸಿದ್ದ ಸಿಸ್ಟರ್ ಸಿಲಿಯಾ, ಸುರಶ್ ರಾಥೋಡ್ ರನ್ನು ಮಲ್ಲಿಗೆಯ ಹಾರ ಹಾಕುವುದರ ಮೂಲಕ ಸ್ವಾಗತಿಸಿಕೊಂಡರು. ಸಂವಿಧಾನ ಸನ್ಮಾನ ಯಾತ್ರೆಯಲ್ಲಿ ಉತ್ತರಪ್ರದೇಶ, ಗುಜರಾತ, ಆಸ್ಸಾಮ್, ಕಾಶ್ಮೀರ, ಮಹಾರಾಷ್ಟ್ರ, ದೆಹಲಿಯ ವಿವಿಧ ಸಂಘಟನೆಗಳ ಮುಖಂಡರು ಬಾಗವಹಿಸಿದ್ದರು.
ಭಟ್ಕಳ ತಾಲೂಕು ಜೆ.ಡಿ.ಎಸ್. ಮುಖಂಡರಾದ ಎಂ.ಡಿ.ನಾಯ್ಕ, ಎಪಿಸಿಆರ್ ಪ್ರಮುಖರಾದ ಮೌಲಾನ ಸೈಯ್ಯದ್ ಝುಬೇರ್, ಖಮರುದ್ದೀನ್ ಮಷಾಯಿಖ್, ವೆಲ್ಫೇರ್ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್ ಕತೀಬ್, ಎಸ್.ಡಿ.ಪಿ. ಮುಖಂಡ ತೌಫೀಖ್ ಬ್ಯಾರಿ, ಎಸ್.ಐ.ಒ ಮುಖಂಡರಾದ ಸನಾವುಲ್ಲಾ ಅಸದಿ, ಬಿಲಾಲ್ ರುಕ್ನುದ್ದೀನ್, ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.







