ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಕುರಿತು ಕಾನೂನು ಪರಿಶೀಲನೆಗೆ ಸಚಿವ ಸಮಿತಿ ರಚನೆ
ಮೀ ಟೂ ಅಭಿಯಾನ

ಹೊಸದಿಲ್ಲಿ,ಅ.24: ‘ಮೀ ಟೂ’ ಅಭಿಯಾನದ ಹಿನ್ನೆಲೆಯಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದ ವಿಷಯಗಳನ್ನು ನಿರ್ವಹಿಸಲು ಹಾಲಿ ಇರುವ ಶಾಸನಾತ್ಮಕ ಮತ್ತು ಸಾಂಸ್ಥಿಕ ವ್ಯವಸ್ಥೆಗಳನ್ನು ಪರಿಶೀಲಿಸಲು ಗೃಹ ಸಚಿವ ರಾಜನಾಥ ಸಿಂಗ್ ಅವರ ನೇತೃತ್ವದಲ್ಲಿ ಸಚಿವ ಸಮಿತಿಯೊಂದನ್ನು ಕೇಂದ್ರವು ಬುಧವಾರ ರಚಿಸಿದೆ.
ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಹಾಲಿ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಈಗಿರುವ ಶಾಸನಾತ್ಮಕ ಮತ್ತು ಸಾಂಸ್ಥಿಕ ವ್ಯವಸ್ಥೆಗಳನ್ನು ಬಲಗೊಳಿಸಲು ಅಗತ್ಯ ಕ್ರಮವನ್ನು ಸಮಿತಿಯು ಶಿಫಾರಸು ಮಾಡಲಿದ್ದು,ಇದಕ್ಕಾಗಿ ಮೂರು ತಿಂಗಳ ಕಾಲಾವಕಾಶವನ್ನು ನಿಡಲಾಗಿದೆ ಎಂದು ಗೃಹಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ,ನಿರ್ಮಲಾ ಸೀತಾರಾಮನ್ ಮತ್ತು ಮನೇಕಾ ಗಾಂಧಿ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಗಳ ವಿರುದ್ಧ ಮಹಿಳೆಯರು ಧ್ವನಿಯೆತ್ತಲು ಸಾಧ್ಯವಾಗುವಂತೆ ಮಹಿಳಾ ಮತ್ತು ಮಕ್ಕಳ ಸಚಿವಾಲಯವು ‘ಶಿ ಬಾಕ್ಸ್’ ಹೆಸರಿನ ವಿದ್ಯುನ್ಮಾನ ದೂರು ಪೆಟ್ಟಿಗೆಯೊಂದನ್ನು ಸ್ಥಾಪಿಸಿದೆ. ಈ ಪೆಟ್ಟಿಗೆಗೆ ದೂರು ಸಲ್ಲಿಕೆಯಾದ ತಕ್ಷಣ ಅಗತ್ಯ ಕ್ರಮಕ್ಕಾಗಿ ಸಂಬಂಧಿಸಿದ ಪ್ರದೇಶದ ಅಧಿಕಾರಿಗೆ ಅದು ರವಾನೆಯಾಗುತ್ತದೆ.
ದೂರುಗಳ ಕುರಿತು ಕೈಗೊಳ್ಳಲಾದ ಕ್ರಮಗಳ ಮೇಲೆ ನಿಯಮಿತ ನಿಗಾಯಿರಿಸಲು ವ್ಯವಸ್ಥೆಯೊಂದನ್ನೂ ಸಚಿವಾಲಯವು ರೂಪಿಸಲಿದೆ.







